ದಕ್ಷಿಣ ಆಫ್ರಿಕಾ ವಿರುದ್ಧ ಸೀಮಿತ ಓವರ್ ಸರಣಿಗೆ ಹಾರ್ದಿಕ್ ಪಾಂಡ್ಯ ವಾಪಸ್ ಸಾಧ್ಯತೆ

ಹಾರ್ದಿಕ್ ಪಾಂಡ್ಯ | Photo Credit : PTI
ಮುಂಬೈ, ಅ.31: ಟಿ20 ಏಶ್ಯ ಕಪ್ ವೇಳೆ ಗಾಯಗೊಂಡು ಕಳೆದ ತಿಂಗಳು ದುಬೈನಲ್ಲಿ ಪಾಕಿಸ್ತಾನ ವಿರುದ್ಧ ನಡೆದಿದ್ದ ಫೈನಲ್ ಪಂದ್ಯದಿಂದ ವಂಚಿತರಾಗಿದ್ದ ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧ ನವೆಂಬರ್-ಡಿಸೆಂಬರ್ ನಲ್ಲಿ ಸ್ವದೇಶದಲ್ಲಿ ನಡೆಯಲಿರುವ ಸೀಮಿತ ಓವರ್ ಕ್ರಿಕೆಟ್ ಸರಣಿಯ ಮೂಲಕ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ಮರಳುವ ಸಾಧ್ಯತೆಯಿದೆ.
2 ಪಂದ್ಯಗಳ ಟೆಸ್ಟ್ ಸರಣಿಯ ನಂತರ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ನ.30ರಿಂದ ರಾಂಚಿಯಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿವೆ. ಕಟಕ್ ನಲ್ಲಿ ಡಿಸೆಂಬರ್ 9ರಿಂದ ಐದು ಪಂದ್ಯಗಳ ಟಿ20 ಸರಣಿಯು ಆರಂಭವಾಗಲಿದೆ.
ರಜೆಯ ವಿರಾಮದ ನಂತರ ಹಾರ್ದಿಕ್ ಅವರು ನ.21ರಂದು ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ಗೆ ತೆರಳಲಿದ್ದಾರೆ. ಅವರು ಒಂದು ತಿಂಗಳ ಕಾಲ ಸಿಒಇನಲ್ಲಿ ಇರಲಿದ್ದಾರೆ. ತನ್ನ ಜಿಮ್ ಸೆಶನ್ಸ್ ಆರಂಭಿಸಿರುವ ಹಾರ್ದಿಕ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್ ಕ್ರಿಕೆಟ್ ಸರಣಿಯಲ್ಲಿ ಆಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಆಸ್ಟ್ರೇಲಿಯ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ನಿರತರಾಗಿದ್ದಾಗ ಗಂಭೀರ ಗಾಯಗೊಂಡಿದ್ದ ಭಾರತದ ಏಕದಿನ ಬ್ಯಾಟರ್ ಶ್ರೇಯಸ್ ಅಯ್ಯರ್ ಎರಡು ತಿಂಗಳ ಕಾಲ ಸಕ್ರಿಯ ಕ್ರಿಕೆಟ್ ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಗಾಯದಿಂದಾಗಿ ಸ್ವದೇಶದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಿಂದಲೂ ಹೊರಗುಳಿಯಲಿದ್ದಾರೆ. ಜನವರಿ 11ರಿಂದ ನ್ಯೂಝಿಲ್ಯಾಂಡ್ ವಿರುದ್ಧ ಆರಂಭವಾಗಲಿರುವ ಏಕದಿನ ಸರಣಿಯ ಮೂಲಕ ಸ್ಪರ್ಧಾತ್ಮಕ ಕ್ರಿಕೆಟಿಗೆ ವಾಪಸಾಗುವ ನಿರೀಕ್ಷೆ ಇದೆ.







