ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ಹಾರ್ದಿಕ್ ಪಾಂಡ್ಯ ಅಲಭ್ಯ

ಹಾರ್ದಿಕ್ ಪಾಂಡ್ಯ | Photo Credit : PTI
ಹೊಸದಿಲ್ಲಿ, ನ.20: ಸ್ಪರ್ಧಾತ್ಮಕ ಕ್ರಿಕೆಟಿಗೆ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪುನರಾಗಮನ ಮತ್ತಷ್ಟು ವಿಳಂಬವಾಗಲಿದ್ದು, ಈ ಹಿನ್ನೆಲೆಯಲ್ಲಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ವಂಚಿತವಾಗುವ ಸಾಧ್ಯತೆಯಿದೆ.
ಮೂರು ಪಂದ್ಯಗಳ ಏಕದಿನ ಸರಣಿಯು ರಾಂಚಿ, ರಾಯ್ಪುರ ಹಾಗೂ ವಿಶಾಖಪಟ್ಟಣದಲ್ಲಿ ಕ್ರಮವಾಗಿ ನವೆಂಬರ್ 30, ಡಿಸೆಂಬರ್ 3 ಹಾಗೂ ಡಿಸೆಂಬರ್ 6ರಂದು ನಡೆಯಲಿದೆ.
ಪಾಂಡ್ಯ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಮೊದಲ ಅಥವಾ ಎರಡನೇ ಸುತ್ತಿನಲ್ಲಿ ಬರೋಡಾ ಕ್ರಿಕೆಟ್ ತಂಡವನ್ನು ಸೇರುವ ಸಾಧ್ಯತೆಯಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಈ ಯೋಜನೆಯಲ್ಲಿ ಬದಲಾವಣೆಯಾಗಲಿದೆ.
32ರ ಹರೆಯದ ಪಾಂಡ್ಯ ಮುಂದಿನ ವಾರ ಹೈದರಾಬಾದ್ಗೆ ತಲುಪುವ ಬದಲು ನವೆಂಬರ್ 30 ಅಥವಾ ಡಿಸೆಂಬರ್ 2ರಂದು ತನ್ನ ರಾಜ್ಯ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.
ದಕ್ಷಿಣ ಆಫ್ರಿಕಾ ವಿರುದ್ಧ್ದ ಡಿಸೆಂಬರ್ 9ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಸರಣಿಗಾಗಿ ಟಿ20 ತಂಡವನ್ನು ಸೇರುವ ಮೊದಲು ಹಾರ್ದಿಕ್ ಪಾಂಡ್ಯ ಕನಿಷ್ಠ ಮೂರು ಸ್ಪರ್ಧಾತ್ಮಕ ಪಂದ್ಯಗಳನ್ನು ಆಡಲು ಅವಕಾಶ ನೀಡಬಹುದು.
ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯು ನವೆಂಬರ್ 30ರಿಂದ ಆರಂಭವಾಗಲಿದ್ದು, ಈ ಸರಣಿಯಲ್ಲಿ ಪಾಂಡ್ಯ ಲಭ್ಯವಿದ್ದರೆ, ಒಂದು ಅಥವಾ ಗರಿಷ್ಠ ಎರಡು ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಆಡಬಹುದು. ಸುಮಾರು ಎರಡು ತಿಂಗಳುಗಳಿಂದ ಕ್ರಿಕೆಟ್ ನಿಂದ ದೂರ ಇರುವ ಪಾಂಡ್ಯ ಅವರನ್ನು ಏಕದಿನ ತಂಡದಲ್ಲಿ ಆಡಿಸಲು ಬಿಸಿಸಿಐನ ಸಿಒಇ ಒಲವು ತೋರುತ್ತಿಲ್ಲ. ಮುಂದಿನ ವರ್ಷದ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಟಿ20 ಸರಣಿಯಲ್ಲಿ ಪಾಂಡ್ಯರನ್ನು ಸಜ್ಜುಗೊಳಿಸಲು ಆದ್ಯತೆ ನೀಡಲಾಗುತ್ತಿದೆ.
ಸೆಪ್ಟಂಬರ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಏಶ್ಯ ಕಪ್ ಟೂರ್ನಿಯ ಫೈನಲ್ ನಿಂದ ಹೊರಗುಳಿಯಲು ಕಾರಣವಾಗಿದ್ದ ಗಾಯದಿಂದ ಚೇತರಿಸಿಕೊಳ್ಳಲು ಪಾಂಡ್ಯ ಕಳೆದ ಕೆಲವು ವಾರಗಳಿಂದ ಬೆಂಗಳೂರಿನಲ್ಲಿದ್ದಾರೆ. ಆಸ್ಟ್ರೇಲಿಯದಲ್ಲಿ ನಡೆದ ಸಂಪೂರ್ಣ ಬಿಳಿ ಚೆಂಡಿನ ಸರಣಿಯಿಂದ ವಂಚಿತರಾಗಿದ್ದ ಆಲ್ ರೌಂಡರ್ ಪಾಂಡ್ಯ ಅವರು ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದಲೂ ಹೊರಗುಳಿಯಲಿದ್ದಾರೆ. ಆದರೆ ಮುಂದಿನ ತಿಂಗಳು ಹರಿಣ ಪಡೆ ವಿರುದ್ದ ಟಿ20 ಸರಣಿಯಲ್ಲಿ ಮೈದಾನಕ್ಕಿಳಿಯುವ ಆಶಾವಾದದಲ್ಲಿದ್ದಾರೆ.







