ಯುವರಾಜ್ ಸಿಂಗ್ ದಾಖಲೆ ಮುರಿದ ಹಾರ್ದಿಕ್ ಪಾಂಡ್ಯ

ಹಾರ್ದಿಕ ಪಾಂಡ್ಯ , ಯುವರಾಜ್ ಸಿಂಗ್ | Photo Credit : PTI
ಹೊಸದಿಲ್ಲಿ, ಡಿ.20: ಒಂದೇ ಟಿ-20 ಪಂದ್ಯದಲ್ಲಿ ಅತಿ ಹೆಚ್ಚು ಬಾರಿ ಅರ್ಧಶತಕ ಹಾಗೂ ಕನಿಷ್ಠ ಒಂದು ವಿಕೆಟ್ ಉರುಳಿಸಿದ ಮೊದಲ ಭಾರತೀಯ ಆಲ್ರೌಂಡರ್ ಎನಿಸಿಕೊಂಡಿರುವ ಹಾರ್ದಿಕ ಪಾಂಡ್ಯ ಲೆಜೆಂಡರಿ ಯುವರಾಜ್ ಸಿಂಗ್ ಅವರ ದೀರ್ಘಕಾಲದ ದಾಖಲೆಯನ್ನು ಮುರಿದರು.
ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಶುಕ್ರವಾರ ನಡೆದ ಐದನೇ ಹಾಗೂ ಕೊನೆಯ ಟಿ-20 ಪಂದ್ಯದಲ್ಲಿ ಪಾಂಡ್ಯ ಈ ಮೈಲಿಗಲ್ಲು ತಲುಪಿದ್ದಾರೆ.
ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ನೀಡಿರುವ ಉತ್ತಮ ಆರಂಭ ಪಡೆದ ಲಾಭ ಪಡೆದ ಪಾಂಡ್ಯ ಅವರು ತಿಲಕ್ ವರ್ಮಾ ಜೊತೆಗೂಡಿ ದಕ್ಷಿಣ ಆಫ್ರಿಕಾದ ಬೌಲಿಂಗ್ ದಾಳಿಯನ್ನು ಹಿಗ್ಗಾಮುಗ್ಗ ದಂಡಿಸಿದರು. ತಿಲಕ್ ಅವರೊಂದಿಗೆ ನಾಲ್ಕನೇ ವಿಕೆಟ್ಗೆ 105 ರನ್ ಜೊತೆಯಾಟ ನಡೆಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.
ಪಾಂಡ್ಯ 252ರ ಸ್ಟ್ರೈಕ್ ರೇಟ್ ನಲ್ಲಿ ಕೇವಲ 25 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಐದು ಸಿಕ್ಸರ್ಗಳ ಸಹಿತ 63 ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲಿ ಮೂರು ಓವರ್ಗಳಲ್ಲಿ 41 ರನ್ ಬಿಟ್ಟುಕೊಟ್ಟಿದ್ದರೂ 17 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ಗಳ ಸಹಿತ 31 ರನ್ ಗಳಿಸಿ ಪಂದ್ಯವನ್ನು ಸೆಳೆಯುವ ಭೀತಿ ಹುಟ್ಟಿಸಿದ್ದ ಡೆವಾಲ್ಡ್ ಬ್ರೆವಿಸ್ ವಿಕೆಟನ್ನು ಉರುಳಿಸಿದರು.
ಇದೀಗ ಪಾಂಡ್ಯ ಅವರು ಟಿ-20 ಕ್ರಿಕೆಟ್ನಲ್ಲಿ ನಾಲ್ಕು ಬಾರಿ 50ಕ್ಕೂ ಅಧಿಕ ರನ್ ಹಾಗೂ ಕನಿಷ್ಠ ಒಂದು ವಿಕೆಟ್ ಪಡೆದಿದ್ದಾರೆ. ಈ ಮೂಲಕ ಮೂರು ಬಾರಿ ಈ ಸಾಧನೆ ಮಾಡಿದ್ದ ಯುವರಾಜ್ ಸಿಂಗ್ರ ದಾಖಲೆಯನ್ನು ಮುರಿದರು.
ವಿರಾಟ್ ಕೊಹ್ಲಿ ಕೂಡ ಈ ಪಟ್ಟಿಯಲ್ಲಿದ್ದು, 2012ರ ಟಿ-20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಹಾಗೂ 2016ರ ಟಿ-20 ವಿಶ್ವಕಪ್ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಈ ಸಾಧನೆ ಮಾಡಿದ್ದರು. ಶಿವಂ ದುಬೆ ಕೂಡ ಎರಡು ಬಾರಿ ಈ ಸಾಧನೆ ಮಾಡಿದ್ದರು.
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟಿಗೆ ವಾಪಸಾಗಿರುವ ಪಾಂಡ್ಯ ಅವರು ಮೂರು ಇನಿಂಗ್ಸ್ಗಳಲ್ಲಿ 71ರ ಸರಾಸರಿಯಲ್ಲಿ 186.84ರ ಸ್ಟ್ರೈಕ್ರೇಟ್ನಲ್ಲಿ ಎರಡು ಅರ್ಧಶತಕಗಳ ಸಹಿತ 142 ರನ್ ಗಳಿಸಿ ಸರಣಿಯಲ್ಲಿ ಮೂರನೇ ಗರಿಷ್ಠ ಸ್ಕೋರ್ ಗಳಿಸಿದ್ದಾರೆ. 38ರ ಸರಾಸರಿಯಲ್ಲಿ ಮೂರು ವಿಕೆಟ್ಗಳನ್ನು ಕಬಳಿಸಿದ್ದಾರೆ. ಆದರೆ ಇಕಾನಮಿ ರೇಟ್ 10ಕ್ಕೂ ಅಧಿಕ ಇರುವುದು ಕಳವಳಕಾರಿ ವಿಚಾರವಾಗಿದೆ.
ಐದನೇ ಟಿ-20 ಪಂದ್ಯದಲ್ಲಿ ಟಾಸ್ ಜಯಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು. ಭಾರತ ತಂಡವು 5 ವಿಕೆಟ್ಗಳ ನಷ್ಟಕ್ಕೆ 231 ರನ್ ಗಳಿಸಿದೆ. ಗೆಲ್ಲಲು 232 ರನ್ ಚೇಸ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 8 ವಿಕೆಟ್ಗಳ ನಷ್ಟಕ್ಕೆ 201 ರನ್ ಗಳಿಸಿದ್ದು, 30 ರನ್ಗಳಿಂದ ಸೋಲುಂಡಿತ್ತು. 63 ರನ್ ಹಾಗೂ 41 ರನ್ಗೆ 1 ವಿಕೆಟ್ ಪಡೆದಿದ್ದ ಪಾಂಡ್ಯ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಒಟ್ಟು 10 ವಿಕೆಟ್ಗಳನ್ನು ಪಡೆದ ವರುಣ್ ಚಕ್ರವರ್ತಿ ಅವರು ‘ಸರಣಿಶ್ರೇಷ್ಠ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.







