ವಾಂಖೆಡೆ ಕ್ರೀಡಾಂಗಣದ ಮೈದಾನದ ಸಿಬ್ಬಂದಿಗೆ ಉಡುಗೊರೆ ನೀಡುವ ಮೂಲಕ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ!

ಹಾರ್ದಿಕ್ ಪಾಂಡ್ಯ | Photo Credit : X
ಹೊಸದಿಲ್ಲಿ: ಭಾರತ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸಾವಿರಾರು ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ಟಿ-20 ವಿಶ್ವಕಪ್ ಸಿದ್ಧತೆಯ ವೇಳೆ ಪಾಂಡ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಾತ್ರಿಯಿಡೀ ಅಭ್ಯಾಸ ನಡೆಸಿದ್ದರು. ಕೆಲವೊಮ್ಮೆ ಮಧ್ಯರಾತ್ರಿಯವರೆಗೂ ಅಭ್ಯಾಸದಲ್ಲಿ ತೊಡಗಿಸಿಕೊಂಡಿರುತ್ತಿದ್ದರು. ಈ ಹಂತದಲ್ಲಿ ಅವರು ನಾನು ಮತ್ತೆ ವಾಂಖೆಡೆ ಕ್ರೀಡಾಂಗಣಕ್ಕೆ ಮರಳಿ ಬಂದಾಗ ನಿಮಗೆಲ್ಲ ಬಹುಮಾನ ನೀಡುತ್ತೇನೆ ಎಂದು ವಾಂಖೆಡೆ ಕ್ರೀಡಾಂಗಣದ ಮೈದಾನದ ಸಿಬ್ಬಂದಿಗಳಿಗೆ ಭರವಸೆ ನೀಡಿದ್ದರು.
ಇದೀಗ ಪಾಂಡ್ಯ ತಮ್ಮ ಭರವಸೆ ಉಳಿಸಿಕೊಂಡಿದ್ದಾರೆ. ಗುರುವಾರ ವಾಂಖೆಡೆ ಕ್ರೀಡಾಂಗಣದ ಮೈದಾನದ ಸಿಬ್ಬಂದಿಗಳಿಗೆ ಹಾರ್ದಿಕ್ ಪಾಂಡ್ಯ ತಾವು ಕೊಟ್ಟ ಮಾತಿನಂತೆ ಉಡುಗೊರೆ ನೀಡುವ ಮೂಲಕ, ಅತ್ಯಗತ್ಯ ಸಂದರ್ಭದಲ್ಲಿ ಅವರು ನೀಡಿದ ನೆರವನ್ನು ಸ್ಮರಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡದ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದರು. ಇದರ ಬೆನ್ನಿಗೇ ಅವರು ತೋರಿಸಿರುವ ಈ ಔದಾರ್ಯ ಅವರನ್ನು ಮತ್ತಷ್ಟು ಉನ್ನತ ಸ್ಥಾನಕ್ಕೇರಿಸಿದೆ.




