ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಿಂದ ಹೊರಗುಳಿದ ಹಾರ್ದಿಕ್ ಪಾಂಡ್ಯ

Photo Credit: PTI
ಮುಂಬೈ, ಜೂ.20: ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜುಲೈನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.
ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ‘ಫಿಟ್ನೆಸ್ ಪರೀಕ್ಷೆಯನ್ನು ಆಧರಿಸಿ’ ಸರಣಿಗೆ ಆಯ್ಕೆಯಾಗುವ ಸಾಧ್ಯತೆಯಿದೆ. ಕೊಹ್ಲಿ ಅವರು ಜೂನ್ 22ರಂದು ಬೆಂಗಳೂರಿನ ಬಿಸಿಸಿಐನ ಸೆಂಟರ್ ಆಫ್ ಎಕ್ಸೆಲೆನ್ಸ್ನಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜುಲೈ 14ರಿಂದ 19ರವರೆಗೆ ಇಂಗ್ಲೆಂಡ್ನಲ್ಲಿ ನಡೆಯಲಿರುವ ಏಕದಿನ ಸರಣಿಗಾಗಿ ಟೀಮ್ ಇಂಡಿಯಾವನ್ನು ಶೀಘ್ರವೇ ಪ್ರಕಟಿಸಲಾಗುವುದು. ಮೂರು ಏಕದಿನ ಪಂದ್ಯಗಳು ಬರ್ಮಿಂಗ್ಹ್ಯಾಮ್ (ಜುಲೈ 14), ಕಾರ್ಡಿಫ್ (ಜುಲೈ 16) ಹಾಗೂ ಲಾರ್ಡ್ಸ್ (ಜುಲೈ 19)ನಲ್ಲಿ ನಡೆಯಲಿವೆ.
‘ಹಾರ್ದಿಕ್ ಪಾಂಡ್ಯ ಏಕದಿನ ಮಾದರಿಯ ಕ್ರಿಕೆಟ್ಗೆ ಅಗತ್ಯವಿರುವ ಫಿಟ್ನೆಸ್ ಪಡೆದಿಲ್ಲ. ಅವರು ಏಕದಿನ ಕ್ರಿಕೆಟ್ಗೆ ಸಂಪೂರ್ಣ ಫಿಟ್ನೆಸ್ ಪಡೆಯಲು ಇನ್ನಷ್ಟು ಸಮಯದ ಅಗತ್ಯವಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
2026ರ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿದ ನಂತರ ಬಲ ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಕೊಹ್ಲಿ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಲಂಡನ್ನ ಸಿಒಇ ತಂಡವು ಅವರನ್ನು ಪರೀಕ್ಷಿಸಿದೆ. ಅವರು ಜೂನ್ 22ರಂದು ಸಿಒಇಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಾಯದ ಸಮಸ್ಯೆಯ ಕಾರಣದಿಂದ ಅವರು ಅಫ್ಘಾನಿಸ್ತಾನದ ವಿರುದ್ಧ ಸ್ವದೇಶದಲ್ಲಿ ನಡೆಯುತ್ತಿರುವ ಏಕದಿನ ಸರಣಿಯಿಂದ ವಂಚಿತರಾಗಿದ್ದಾರೆ. 32 ವರ್ಷದ ಆಲ್ರೌಂಡರ್ ಜೂನ್ 2ರಿಂದ ಸಿಒಇಯಲ್ಲಿ ತರಬೇತಿ ನಡೆಸುತ್ತಿದ್ದಾರೆ.






