ಅಫ್ಘಾನಿಸ್ತಾನ ವಿರುದ್ಧ ಟ್ವೆಂಟಿ-20 ಸರಣಿ, ಐಪಿಎಲ್ ಗೆ ಹಾರ್ದಿಕ್ ಪಾಂಡ್ಯ ಲಭ್ಯ: ವರದಿ

Photo- PTI
ಮುಂಬೈ: ಭಾರತದ ಆಲ್ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಕಾಲುನೋವಿನಿಂದ ಚೇತರಿಸಿಕೊಳ್ಳುತ್ತಿದ್ದು, ಸ್ವದೇಶದಲ್ಲಿ ಜನವರಿ 11ರಿಂದ ಅಫ್ಘಾನಿಸ್ತಾನದ ವಿರುದ್ಧ ಆರಂಭವಾಗಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಭಾರತವನ್ನು ಮುನ್ನಡೆಸುವ ಸಾಧ್ಯತೆಯಿದೆ ಹಾಗೂ ಮುಂಬರುವ ಐಪಿಎಲ್ ಋತುವಿನಲ್ಲಿ ಕೂಡ ಆಡಲಿದ್ದಾರೆ ಎಂದು ಬಲ್ಲ ಮೂಲಗಳು ಆಂಗ್ಲ ಪತ್ರಿಕೆಗೆ ತಿಳಿಸಿವೆ.
ಪಾಂಡ್ಯ ಅವರು ತಮ್ಮ ಕಾಲಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಅವರು ಪ್ರತಿದಿನ ತರಬೇತಿ ಪಡೆಯುತ್ತಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.
ಗಾಯದ ಸಮಸ್ಯೆಯ ಕಾರಣಕ್ಕೆ ಪಾಂಡ್ಯ ಇನ್ನೂ ಕೆಲವು ತಿಂಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿಯಲಿದ್ದು, 2024ರ ಐಪಿಎಲ್ನಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎಂದು ಶನಿವಾರ ವರದಿಯಾಗಿತ್ತು.
ಮುಂಬೈ ಇಂಡಿಯನ್ಸ್ ಇತ್ತೀಚೆಗೆ ಟ್ರೇಡಿಂಗ್ ವಿಂಡೋದಲ್ಲಿ 15 ಕೋ.ರೂ.ಗೆ ಗುಜರಾತ್ ಟೈಟಾನ್ಸ್ನಿಂದ ಹಾರ್ದಿಕ್ ಪಾಂಡ್ಯರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ರೋಹಿತ್ ಶರ್ಮಾ ಬದಲಿಗೆ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕರನ್ನಾಗಿ ನೇಮಿಸಿತ್ತು.
ನವೆಂಬರ್ನಲ್ಲಿ ಪುಣೆಯಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ 2023ರ ಏಕದಿನ ವಿಶ್ವಕಪ್ನ ಲೀಗ್ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಹಾರ್ದಿಕ್ ಕಾಲಿಗೆ ಗಾಯವಾಗಿತ್ತು. ಆ ನಂತರ ಅವರು ವಿಶ್ವಕಪ್ ಟೂರ್ನಿ, ದಕ್ಷಿಣ ಆಫ್ರಿಕಾ ಪ್ರವಾಸದಿಂದಲೂ ಹೊರಗುಳಿದಿದ್ದರು.
ಹಾರ್ದಿಕ್ ಫಿಟ್ ಹಾಗೂ ಫೈನ್ ಆಗಿದ್ದಾರೆ. ವಾಸ್ತವವಾಗಿ ಅವರು ಪ್ರತಿದಿನ ಅಭ್ಯಾಸ ನಡೆಸುತ್ತಿದ್ದಾರೆ. ಅವರು ಐಪಿಎಲ್ನಿಂದ ಹೊರಗುಳಿಯಲಿದ್ದಾರೆ ಎಂಬ ಎಲ್ಲ ಮಾತುಗಳು ಕೇವಲ ವದಂತಿಯಾಗಿದೆ. ಐಪಿಎಲ್-2024ಕ್ಕೆ ಇನೂ ಸುಮಾರು 4 ತಿಂಗಳುಗಳು ಬಾಕಿ ಉಳಿದಿವೆ. ಹೀಗಾಗಿ ಈ ಕ್ಷಣದಲ್ಲಿ ಬರುವ ಸುದ್ದಿ ಕೇವಲ ಊಹಾಪೋಹವಾಗಿದೆ. ಅವರು ಖಂಡಿತವಾಗಿಯೂ ಐಪಿಎಲ್ಗೆ ಫಿಟ್ ಇದ್ದಾರೆ. ಅಫ್ಘಾನಿಸ್ತಾನದ ಟಿ-20 ಸರಣಿಯಲ್ಲೂ ಆಡಬಹುದು ಎಂದು ಮೂಲಗಳು ತಿಳಿಸಿವೆ.
ಪಾಂಡ್ಯ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಎರಡು ವೀಡಿಯೊ ಹಾಕಿದ್ದರು. ಅದರಲ್ಲಿ ಒಂದರಲ್ಲಿ ಅವರು ಜಿಮ್ನಲ್ಲಿ ಅಭ್ಯಾಸ ಮಾಡುತ್ತಿದ್ದರೆ, ಮತ್ತೊಂದರಲ್ಲಿ ತನ್ನ ಪುತ್ರನೊಂದಿಗೆ ಆಡುತ್ತಿದ್ದರು.
► ಅಫ್ಘಾನಿಸ್ತಾನ ವಿರುದ್ಧ ಟಿ-20 ಸರಣಿಗೆ ಸೂರ್ಯಕುಮಾರ್ ಅಲಭ್ಯ
ಇದೇ ವೇಳೆ ಸೂರ್ಯಕುಮಾರ್ ಯಾದವ್ ಮುಂಬರುವ ಜನವರಿ 11ರಿಂದ ಆರಂಭವಾಗಲಿರುವ ಅಫ್ಘಾನಿಸ್ತಾನದ ವಿರುದ್ದದ ಟಿ-20 ಸರಣಿಯಿಂದ ಹೊರಗುಳಿಯಲಿದ್ದಾರೆ.
ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಕೊನೆಗೊಂಡಿದ್ದ ಟಿ-20 ಸರಣಿಯ ಕೊನೆಯ ಪಂದ್ಯದ ವೇಳೆ ಸೂರ್ಯಕುಮಾರ್ ಕಾಲಿಗೆ ಗಾಯವಾಗಿತ್ತು.
ಕಾಲುನೋವಿನಿಂದ ಚೇತರಿಸಿಕೊಳ್ಳಲು ಸೂರ್ಯಕುಮಾರ್ ಆರರಿಂದ ಏಳು ವಾರಗಳನ್ನು ತೆಗೆದುಕೊಳ್ಳಲಿದ್ದಾರೆ. ಅವರೀಗ ವಿರಾಮ ಪಡೆದಿದ್ದಾರೆ. ಮುಂದಿನ ವಾರ ಎನ್ಸಿಎಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೋಹಾನ್ಸ್ಬರ್ಗ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಕೊನೆಯ ಟ್ವೆಂಟಿ-20 ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ 31ರ ಹರೆಯದ ಸೂರ್ಯಕುಮಾರ್ ಕಾಲಿಗೆ ಗಾಯವಾಗಿತ್ತು. ಸೂರ್ಯ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸ್ವದೇಶದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸರಣಿಯಲ್ಲಿ ನಾಯಕತ್ವದ ಬಿಕ್ಕಟ್ಟು ತಲೆತೋರಿದೆ.
ಸೂರ್ಯ ಹಾಗೂ ಹಾರ್ದಿಕ್ ಇಬ್ಬರೂ ಅಲಭ್ಯರಾದರೆ, ರವೀಂದ್ರ ಜಡೇಜರನ್ನು ಹಂಗಾಮಿ ನಾಯಕನಾಗಿ ನೇಮಿಸಬಹುದು. ರೋಹಿತ್ ಶರ್ಮಾಗೆ ತಂಡವನ್ನು ಮುನ್ನಡೆಸುವಂತೆ ಕೇಳಬಹುದು.
ಏಶ್ಯನ್ ಗೇಮ್ಸ್ನಲ್ಲಿ ಭಾರತದ ನಾಯಕತ್ವವಹಿಸಿದ್ದ ಋತುರಾಜ್ ಗಾಯಕ್ವಾಡ್ ಕೂಡ ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಕೈಬೆರಳ ಮುರಿತಕ್ಕೆ ಒಳಗಾಗಿ ಸರಣಿಯಿಂದ ಹೊರಗುಳಿದಿದ್ದಾರೆ.







