IPL | ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಕಳೆದುಕೊಳ್ಳಲಿರುವ ಹಾರ್ದಿಕ್ ಪಾಂಡ್ಯ?

ಹಾರ್ದಿಕ್ ಪಾಂಡ್ಯ (Photo credit: PTI)
ಮುಂಬೈ: ಈ ಬಾರಿಯ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ತಾನಾಡಿದ 14 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಒಂಬತ್ತನೆ ಸ್ಥಾನಕ್ಕೆ ಕುಸಿದ ಪರಿಣಾಮ, ಹಾರ್ದಿಕ್ ಪಾಂಡ್ಯ ನಾಯಕತ್ವದ ಅಂತ್ಯ ಸನ್ನಿಹಿತವಾಗಿದೆ. ಸತತ ಆರನೆಯ ವರ್ಷ ಚಾಂಪಿಯನ್ ಪಟ್ಟದಿಂದ ವಂಚಿತವಾಗಿರುವ ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕತ್ವ ಸೇರಿದಂತೆ ಸಮಗ್ರವಾಗಿ ಪುನರ್ ರಚಿಸಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಂದಾಗಿದೆ ಎಂದು ವರದಿಯಾಗಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವ ಕಳೆದುಕೊಳ್ಳಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಸಂಪರ್ಕದಲ್ಲಿರುವ ಕನಿಷ್ಠ ಮೂರು ಮಂದಿ ತಿಳಿಸಿದ್ದಾರೆ ಎಂದು The Indian Express ಸುದ್ದಿ ಸಂಸ್ಥೆ ವರದಿ ಮಾಡಿದೆ. ಅವರ ಬದಲಿಗೆ ಮತ್ತೊಬ್ಬ ನಾಯಕನನ್ನು ಆಯ್ಕೆ ಮಾಡುವ ಕುರಿತೂ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ.
“ಹಾರ್ದಿಕ್ ಪಾಂಡ್ಯರನ್ನು ನಾಯಕರನ್ನಾಗಿ ಉಳಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಆಸಕ್ತಿ ಹೊಂದಿಲ್ಲ ಎಂಬುದಕ್ಕೆ ಈ ಋತುವಿನಲ್ಲಿ ಸಾಕಷ್ಟು ಸಂಕೇತಗಳು ದೊರೆತಿವೆ. ಈ ಬಗ್ಗೆ ತಂಡದಲ್ಲಿ ಸ್ಪಷ್ಟವಾದ ಊಹಾಪೋಹಗಳಿವೆ” ಎಂದು ಮೂಲಗಳು ತಿಳಿಸಿವೆ.
“ಮುಂದಿನ ದಿನಗಳಲ್ಲಿ ಈ ಕುರಿತು ಗಂಭೀರ ಚರ್ಚೆಗಳು ನಡೆಯಲಿವೆ. ಎಲ್ಲ ಆಯ್ಕೆಗಳನ್ನೂ ತೂಗಿ ನೋಡಲಾಗುತ್ತದೆ. ಹಲವಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಕೇವಲ ಆಟಗಾರರಾಗಿ ಅವರು ತಂಡದಲ್ಲಿ ಉಳಿಯಬಹುದೆ?” ಎಂಬ ಪ್ರಶ್ನೆಗಳೂ ಉದ್ಭವಿಸಿವೆ ಎಂದು ಮುಂಬೈನ ಮಾಜಿ ಆಟಗಾರರೊಬ್ಬರು ತಿಳಿಸಿದ್ದಾರೆ. ನಾಯಕತ್ವ ಪ್ರಶ್ನೆಗಿಂತಲೂ ಸಮಸ್ಯೆಗಳು ದೊಡ್ಡದಾಗಿವೆ ಎಂದು ಹೇಳಲಾಗಿದೆ.
ಮುಂಬೈ ಇಂಡಿಯನ್ಸ್ ತಂಡದೊಂದಿಗಿನ ಹಾರ್ದಿಕ್ ಪಾಂಡ್ಯ ಸಂಬಂಧ ಮೊದಲಿನಿಂದಲೂ ಸಂಕೀರ್ಣವಾಗಿತ್ತು ಎನ್ನಲಾಗಿದೆ. ಮೂಲತಃ ಮುಂಬೈ ಇಂಡಿಯನ್ಸ್ ತಂಡದ ಶೋಧವಾದ ಹಾರ್ದಿಕ್ ಪಾಂಡ್ಯ, 2022ರಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ಬಿಡುಗಡೆಗೊಂಡಿದ್ದರು. ಗುಜರಾತ್ ಟೈಟನ್ಸ್ ತಂಡದ ನಾಯಕರಾದ ಅವರು ಐಪಿಎಲ್ ಟ್ರೋಫಿ ಜಯಿಸಿದರು. 2024ರಲ್ಲಿ ಮತ್ತೆ ಮುಂಬೈ ಇಂಡಿಯನ್ಸ್ ಗೆ ಮರಳಿದ್ದ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮ ಬದಲಿಗೆ ತಂಡದ ನಾಯಕನಾಗಿದ್ದರು.






