ಮಹಿಳಾ ಹಾಕಿ ತಂಡದ ಕೋಚ್ ಹರೇಂದ್ರ ಸಿಂಗ್ ರಾಜೀನಾಮೆ

ಹರೇಂದ್ರ ಸಿಂಗ್ | Photo Credit : @TheHockeyIndia
ಹೊಸದಿಲ್ಲಿ, ಡಿ. 1: ಭಾರತೀಯ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್ ಹರೇಂದ್ರ ಸಿಂಗ್ ‘‘ವೈಯಕ್ತಿಕ ಕಾರಣಗಳಿಗಾಗಿ’’ ತಕ್ಷಣದಿಂದ ಜಾರಿಗೆ ಬರುವಂತೆ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಅವರು ಕಳೆದ ವರ್ಷದ ಎಪ್ರಿಲ್ನಲ್ಲಿ ಈ ಹುದ್ದೆಯನ್ನು ವಹಿಸಿಕೊಂಡಿದ್ದರು. ಬಳಿಕ, ಕಳೆದ ವರ್ಷದ ನವೆಂಬರ್ನಲ್ಲಿ ಅವರ ಉಸ್ತುವಾರಿಯ ತಂಡವು ಬಿಹಾರದ ರಾಜ್ಗಿರ್ನಲ್ಲಿ ನಡೆದ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದಿದೆ. ಆದರೆ, ಅವರ ಉಸ್ತುವಾರಿಯಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಎಫ್ಐಎಚ್ ಪ್ರೊ ಲೀಗ್ನ 2024-25ರ ಋತುವಿನಲ್ಲಿ ಕೊನೆಯ ಸ್ಥಾನವನ್ನು ಸಂಪಾದಿಸಿದ ಬಳಿಕ ಆ ಪಂದ್ಯಾವಳಿಯಿಂದ ಅನರ್ಹಗೊಂಡಿದೆ.
‘‘ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ಆಗಿರುವುದು ನನಗೆ ಸಿಕ್ಕಿದ ಗೌರವವಾಗಿದೆ. ಅದು ನನ್ನ ವೃತ್ತಿ ಬದುಕಿನ ದೊಡ್ಡ ಘಟನೆಯಾಗಿದೆ. ವೈಯಕ್ತಿಕ ಕಾರಣಗಳಿಂದಾಗಿ ನಾನು ತಂಡವನ್ನು ಬಿಟ್ಟು ಹೊರಹೋಗಬೇಕಾಗಿದೆಯಾದರೂ, ನನ್ನ ಹೃದಯ ಈ ಶ್ರೇಷ್ಠ ತಂಡದ ಜೊತೆಗಿದೆ ಮತ್ತು ಅದರ ಯಶಸ್ಸನ್ನು ಯಾವತ್ತೂ ಬಯಸುತ್ತದೆ’’ ಎಂದು ಹಾಕಿ ಇಂಡಿಯಾ ಹೊರಡಿಸಿದ ಹೇಳಿಕೆಯೊಂದರಲ್ಲಿ ಹರೇಂದ್ರ ಹೇಳಿದ್ದಾರೆ.
ರಾಜೀನಾಮೆಯನ್ನು ಅಂಗೀಕರಿಸಿರುವ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ತಿರ್ಕೆ, ಹರೇಂದ್ರರ ಬದ್ಧತೆಯನ್ನು ಶ್ಲಾಘಿಸಿದ್ದಾರೆ.







