ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ಹುದ್ದೆಯ ಸ್ಪರ್ಧೆಯಲ್ಲಿ ಹರೇಂದ್ರ ಸಿಂಗ್ ಮುಂಚೂಣಿಯಲ್ಲಿ

Photo: X
ಹೊಸದಿಲ್ಲಿ: ಜಾನೆಕ್ ಶೋಪ್ಮನ್ ತೆರವುಗೊಳಿಸಿರುವ ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ಹುದ್ದೆ ಸ್ಪರ್ಧೆಯಲ್ಲಿ ಹರೇಂದ್ರ ಸಿಂಗ್ ಮುಂಚೂಣಿಯಲ್ಲಿದ್ದಾರೆ.
ಅವರು ಇತ್ತೀಚೆಗೆ ಸಂದರ್ಶನಕ್ಕೆ ಹಾಜರಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲು ವಿಫಲ ರಾಗಿರುವ ಭಾರತೀಯ ಮಹಿಳಾ ಹಾಕಿ ತಂಡವನ್ನು ಮೇಲೆತ್ತಲು ಹರೇಂದ್ರ ಸಿಂಗ್ ಸೂಕ್ತ ಕೋಚ್ಅಭ್ಯರ್ಥಿ ಎಂಬ ಇಂಗಿತವನ್ನು ಹಾಕಿ ಇಂಡಿಯಾ ವ್ಯಕ್ತಪಡಿಸಿದೆ.
ಹರೇಂದ್ರ ಸಿಂಗ್ ಹಿಂದೆಯೂ ಇದೇ ಹುದ್ದೆಯನ್ನು ನಿರ್ವಹಿಸಿದ್ದರು. ಬಳಿಕ, 2021ರಲ್ಲಿ ಅಮೆರಿಕದ ಪುರುಷರ ಹಾಕಿ ತಂಡದ ಕೋಚ್ ಆಗಿ ನೇಮಕಗೊಂಡರು.
“ಹೌದು, ಜಾನೆಕ್ ರ ಸ್ಥಾನವನ್ನು ವಹಿಸಿಕೊಳ್ಳುವ ಹಾದಿಯಲ್ಲಿ ಹರೇಂದ್ರ ಇದ್ದಾರೆ. ಅವರನ್ನು ಮಹಿಳಾ ಹಾಕಿ ತಂಡದ ಕೋಚ್ ಆಗಿ ನೇಮಿಸಲು ಹಾಕಿ ಇಂಡಿಯಾ ಉತ್ಸುಕವಾಗಿದೆ. ಹಿಂದೆ ಪುರುಷ ಮತ್ತು ಮಹಿಳಾ ಎರಡೂ ಹಾಕಿ ತಂಡಗಳಿಗೆ ಕೋಚ್ ಆಗಿದ್ದ ಅವರಿಗೆ ಭಾರತೀಯ ಹಾಕಿಯ ವ್ಯವಸ್ಥೆಯ ಅರಿವಿದೆ. ಮಹಿಳಾ ಹಾಕಿ ತಂಡವನ್ನು ಅದರ ನಿಜವಾದ ಸ್ಥಾನಕ್ಕೆ ಕರೆದೊಯ್ಯಲು ಅವರು ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದಾಋಎ'' ಎಂದು ಹಾಕಿ ಇಂಡಿಯಾದ ಮೂಲವೊಂದನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
“ಕಳೆದ ಎರಡು ವರ್ಷಗಳಲ್ಲಿ ಅವರು ದೇಶದಿಂದ ಹೊರಗಿನ ತಂಡಗಳಿಗೆ ತರಬೇತಿ ನೀಡಿರುವುದು ಕೂಡ ಅವರಿಗೆ ಪೂರಕವಾಗಿದೆ. ಈಗ ಅವರ ನೇಮಕಕ್ಕೆ ಸಂಬಂಧಿಸಿ ಇರುವ ಏಕೈಕ ಸಮಸ್ಯೆಯೆಂದರೆ ಅವರ ವೇತನ. ಅದರ ಬಗ್ಗೆ ಮಾತು ಕತೆ ನಡೆದಿದೆ. ಅವರು ಅಮೆರಿಕದಲ್ಲಿ ಉತ್ತಮ ವೇತನವನ್ನು ಪಡೆಯುತ್ತಿದ್ದಾರೆ. ಅದಕ್ಕೆ ಸರಿ ಸಮಾನವಾಗಿ ನಾವು ಅವರಿಗೆ ವೇತನ ನೀಡಲು ಸಾಧ್ಯವಾಗುವುದೇ ಎನ್ನುವುದನ್ನು ನೋಡಬೇಕಾಗಿದೆ'' ಎಂದು ಮೂಲ ಹೇಳಿದೆ.
ಕೋಚ್ ಹುದ್ದೆಯ ಸಂದರ್ಶನಕ್ಕೆ ಹರೇಂದ್ರ ಹಾಜರಾಗಿರುವುದನ್ನು ಹಾಕಿ ಇಂಡಿಯಾ ಮಹಾ ಕಾರ್ಯದರ್ಶಿ ಭೋಲಾನಾಥ ಸಿಂಗ್ ಖಚಿತಪಡಿಸಿದ್ದಾರೆ. ಆದರೆ, ಪಟ್ಟಿಯಲ್ಲಿ ಇತರ ಅಭ್ಯರ್ಥಿಗಳೂ ಇರುವುದರಿಂದ ಅವರ ನೇಮಕಾತಿ ಇನ್ನೂ ಅಂತಿಮವಾಗಿಲ್ಲ ಎಂದು ಹೇಳಿದರು.
ಕ್ರೀಡಾ ಸಚಿವಾಲಯದ ನಿಯಮಗಳನ್ವಯ, ಭಾರತೀಯ ಕೋಚ್ಗಳಿಗೆ ತಿಂಗಳಿಗೆ ಗರಿಷ್ಠ 3 ಲಕ್ಷ ರೂಪಾಯಿ ವೇತನ ನೀಡಬಹುದಾಗಿದೆ. ಆದರೆ, ತಾನೀಗ ಅಮೆರಿಕದ ಹಾಕಿ ತಂಡದ ಕೋಚ್ ಆಗಿ ಪಡೆಯುತ್ತಿರುವ ವೇತನಕ್ಕೆ ಸಮನಾದ ವೇತನಕ್ಕಾಗಿ ಅವರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಭಾರತದಲ್ಲಿ ವಿದೇಶಿ ಕೋಚ್ ಗಳು ಕೆಲಸ ಮಾಡುವುದು ಕಷ್ಟ ಎಂಬ ಕಾರಣವನ್ನು ನೀಡಿ ಮಹಿಳಾ ಹಾಕಿ ತಂಡದ ಕೋಚ್ ಹುದ್ದೆಗೆ ನೆದರ್ಲ್ಯಾಂಡ್ಸ್ನ ಜಾನೆಕ್ ಶೋಪ್ಮನ್ ಕಳೆದ ತಿಂಗಳು ರಾಜೀನಾಮೆ ನೀಡಿದ್ದಾರೆ.







