ಹರಿಕೃಷ್ಣನ್ ಭಾರತದ 87ನೇ ಗ್ರ್ಯಾಂಡ್ ಮಾಸ್ಟರ್

ಹರಿಕೃಷ್ಣನ್ | PC : X
ಹೊಸದಿಲ್ಲಿ: ಏಳು ವರ್ಷಗಳಿಂದ ಹರಿಕೃಷ್ಣನ್ ಇಂಟರ್ನ್ಯಾಶನಲ್ ಮಾಸ್ಟರ್ ಆಗಿಯೇ ಉಳಿದಿದ್ದರು. ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಳ್ಳಲು ಹಲವಾರು ಪಂದ್ಯಾವಳಿಗಳನ್ನು ಆಡಿದ್ದಾರೆ. ಆದರೆ ಪ್ರತೀ ಬಾರಿಯೂ ಕೂದಲೆಳೆ ಅಂತರದಿಂದ ಅವಕಾಶ ಕೈತಪ್ಪುತ್ತಿತ್ತು.
ಶ್ಯಾಮ್ ಸುಂದರ್ರಿಂದ ತರಬೇತಿ ಪಡೆದಿರುವ 23ರ ಹರೆಯದ ಹರಿಕೃಷ್ಣನ್ ಶುಕ್ರವಾರ ಫ್ರಾನ್ಸ್ ನಲ್ಲಿ ನಡೆದ ಲಾ ಪ್ಲಾಗ್ನೆ ಅಂತರರಾಷ್ಟ್ರೀಯ ಚೆಸ್ ಉತ್ಸವದಲ್ಲಿ ಕೊನೆಗೂ ತನ್ನ 3ನೇ ಹಾಗೂ ಕೊನೆಯ ಮಾನದಂಡವನ್ನು ಗಳಿಸಿದರು. ತನ್ನದೇ ದೇಶದ ಪಿ. ಇನಿಯನ್ರೊಂದಿಗೆ ಫೈನಲ್ ಸುತ್ತಿನಲ್ಲಿ ಡ್ರಾ ಸಾಧಿಸಿದ ಹರಿಕೃಷ್ಣನ್ 4ನೇ ಸ್ಥಾನ ಪಡೆದು ಭಾರತದ 87ನೇ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡರು.
‘‘ನನಗೆ ತುಂಬಾ ಖುಷಿಯಾಗುತ್ತಿದೆ. ನಾನು ಇದಕ್ಕಾಗಿ 7 ವರ್ಷಗಳಿಂದ ಕಾಯುತ್ತಿದ್ದೆ. ಗ್ರ್ಯಾಂಡ್ ಮಾಸ್ಟರ್ ಆಗಲು ತುಂಬಾ ವಿಳಂಬವಾಗಿದ್ದನ್ನು ಒಪ್ಪಿಕೊಳ್ಳುವೆ. 2022ರಿಂದ ನಾನು ನಿರಂತರವಾಗಿ ಪಂದ್ಯಾವಳಿಗಳಲ್ಲಿ ಸ್ಪರ್ಧಿಸುತ್ತಿರುವೆ. ಆದರೆ ಜಿಎಂ ಮಾನದಂಡ ಪಡೆದಿರಲಿಲ್ಲ. ಇದು ತುಂಬಾ ತ್ರಾಸದಾಯಕವಾಗಿತ್ತು’’ ಎಂದು ಶನಿವಾರ ಸ್ಟಾರ್ ಸ್ಪೋರ್ಟ್ಸ್ ಗೆ ಹರಿಕೃಷ್ಣ ನ್ ಹೇಳಿದ್ದಾರೆ.





