ಭಾರತದಲ್ಲಿ ಗರಿಷ್ಠ ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ಮೊದಲ ಸ್ಪಿನ್ನರ್ ಹಾರ್ಮರ್

ಸೈಮರ್ ಹಾರ್ಮರ್ | Photo Credit : PTI
ಕೋಲ್ಕತಾ, ನ.16: ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಸೈಮರ್ ಹಾರ್ಮರ್ ಅವರು ದಕ್ಷಿಣ ಆಫ್ರಿಕಾದ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಈಡನ್ಗಾರ್ಡನ್ಸ್ನಲ್ಲಿ ಮೂರೇ ದಿನದಲ್ಲಿ ಕೊನೆಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಹಾರ್ಮರ್ ಒಟ್ಟು 8 ವಿಕೆಟ್ ಗಳನ್ನು ಪಡೆಯುವ ಮೂಲಕ ಈ ಸಾಧನೆ ಮಾಡಿದರು.
ಬಲಗೈ ಆಫ್ ಸ್ಪಿನ್ನರ್ ಹಾರ್ಮರ್ ಅವರು ಶನಿವಾರ ಧ್ರುವ ಜುರೆಲ್ ವಿಕೆಟನ್ನು ಪಡೆಯುವ ಮೂಲಕ ಪೌಲ್ ಆ್ಯಡಮ್ಸ್ ಹಾಗೂ ಇಮ್ರಾನ್ ತಾಹಿರ್(ತಲಾ 14 ವಿಕೆಟ್ ಗಳು)ಹೆಸರಲ್ಲಿದ್ದ ದಾಖಲೆಯನ್ನು ಮುರಿದರು.
ಭಾರತದಲ್ಲಿ 3ನೇ ಟೆಸ್ಟ್ ಪಂದ್ಯವನ್ನಾಡಿದ ಹಾರ್ಮರ್ ಅವರು ರಿಷಭ್ ಪಂತ್, ರವೀಂದ್ರ ಜಡೇಜ ಹಾಗೂ ಕುಲದೀಪ್ರನ್ನು ಔಟ್ ಮಾಡಿ ಇನ್ನೂ ಮೂರು ವಿಕೆಟನ್ನು ಉರುಳಿಸಿದರು. ಇದರೊಂದಿಗೆ ಭಾರತ ನೆಲದಲ್ಲಿ ಒಟ್ಟು 18 ವಿಕೆಟ್ ಗಳನ್ನು ಉರುಳಿಸಿದ್ದಾರೆ.
36ರ ವಯಸ್ಸಿನ ಹಾರ್ಮರ್ ಮೊದಲ ಇನಿಂಗ್ಸ್ ನಲ್ಲಿ ನಾಲ್ಕು ವಿಕೆಟ್ ಪಡೆದಿದ್ದಾರೆ. 2015ರಲ್ಲಿ ಮೊಹಾಲಿ ಹಾಗೂ ನಾಗ್ಪುರದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು. ಆಗ ಒಟ್ಟು 10 ವಿಕೆಟ್ ಗಳನ್ನು ಪಡೆದಿದ್ದರು.





