ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ಗೆ ಐಪಿಎಲ್ ನಿಂದ 2 ವರ್ಷ ನಿಷೇಧ

ಹ್ಯಾರಿ ಬ್ರೂಕ್ | PC : PTI
ಮುಂಬೈ: ಇಂಗ್ಲೆಂಡ್ನ ಅಂತರರಾಷ್ಟ್ರೀಯ ಕ್ರಿಕೆಟಿಗ ಹ್ಯಾರಿ ಬ್ರೂಕ್ ಇತ್ತೀಚೆಗೆ 2025ರ ಆವೃತ್ತಿಯ ಐಪಿಎಲ್ ನಿಂದ ಹಿಂದೆ ಸರಿದಿರುವ ಕಾರಣ ಎರಡು ವರ್ಷಗಳ ಕಾಲ ಐಪಿಎಲ್ ನಿಂದ ನಿಷೇಧಕ್ಕೆ ಒಳಗಾಗಿದ್ದಾರೆ.
ಪಂದ್ಯಾವಳಿಯ ಹೊಸ ಮಾರ್ಗಸೂಚಿಗಳ ಪ್ರಕಾರ, ಹರಾಜಿನಲ್ಲಿ ನೋಂದಾಯಿಸಿಕೊಂಡ ನಂತರ ಆಯ್ಕೆಯಾದ ಯಾವುದೇ ಆಟಗಾರನು ಋತುವಿನ ಆರಂಭದ ಮೊದಲು ತನ್ನನ್ನು ತಾನು ಲಭ್ಯವಿಲ್ಲದಿದ್ದರೆ, ಎರಡು ಋತುಗಳ ತನಕ ಪಂದ್ಯಾವಳಿ ಹಾಗೂ ಆಟಗಾರರ ಹರಾಜಿನಲ್ಲಿ ಭಾಗವಹಿಸುವುದರಿಂದ ನಿಷೇಧಕ್ಕೊಳಗಾಗುತ್ತಾನೆ.
ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಹಾಗೂ ಸಂಬಂಧಪಟ್ಟ ಆಟಗಾರನು ಈ ನಿರ್ಧಾರದ ಕುರಿತು ಈಗಾಗಲೇ ಮಾಹಿತಿ ನೀಡಿದ್ದಾನೆ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.
ಒಂದು ತಂಡದಿಂದ ಆಯ್ಕೆಯಾದ ನಂತರ ಅವರು ಟೂರ್ನಿಯಿಂದ ಹಿಂದೆ ಸರಿದ ಕಾರಣ ಅವರು ಲಭ್ಯವಿದ್ದರೂ ಕೂಡ ಮುಂದಿನ ಋತುವಿನಲ್ಲಿ ಆಡಲು ಅವರು ಅರ್ಹರಾಗುವುದಿಲ್ಲ. ನಾವು ಕ್ರಿಕೆಟ್ ಮಂಡಳಿಗಳಿಗೆ ಅದರ ಬಗ್ಗೆ ತಿಳಿಸಿದ್ದೇವೆ. ನಿಯಮಗಳು, ನಿಯಮಗಳೇ, ಆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಬಿಸಿಸಿಐ ಅಧಿಕಾರಿಗಳು ‘ಸ್ಪೋರ್ಟ್ಸ್ಸ್ಟಾರ್’ಗೆ ತಿಳಿಸಿದರು.
ಕಳೆದ ವರ್ಷ ನಡೆದಿದ್ದ ಆಟಗಾರರ ಮೆಗಾ ಹರಾಜಿನಲ್ಲಿ ಬ್ರೂಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 6.25 ಕೋಟಿ ರೂ.ಗೆ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು. ಈ ಹಿಂದಿನ ಹರಾಜಿನಲ್ಲಿ ಕೂಡ ಡೆಲ್ಲಿ ತಂಡವು 4 ಕೋಟಿ ರೂ.ಗೆ ಖರೀದಿಸಿತ್ತು.
ಮುಂಬರುವ ಐಪಿಎಲ್ ಗೆ ತಾನು ಲಭ್ಯವಿರುವುದಿಲ್ಲ, ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ತನ್ನ ಕರ್ತವ್ಯದತ್ತ ಗಮನ ಹರಿಸುವೆ ಎಂದು ಈ ವಾರದ ಆರಂಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಬ್ರೂಕ್ ಪ್ರಕಟಿಸಿದ್ದರು.