ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬಾಂಗ್ಲಾದೇಶದ ಮೊದಲ ವೇಗದ ಬೌಲರ್ ಹಸನ್ ಮಹ್ಮೂದ್

Photo Credit : ACB
ಹೊಸದಿಲ್ಲಿ, ಅ. 11: ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬಾಂಗ್ಲಾದೇಶ ತಂಡದ ಮೊದಲ ವೇಗದ ಬೌಲರ್ ಎನಿಸಿಕೊಂಡಿರುವ ಹಸನ್ ಮಹ್ಮೂದ್ ಇತಿಹಾಸ ನಿರ್ಮಿಸಿದರು.
26 ವರ್ಷದ ಬಲಗೈ ವೇಗದ ಬೌಲರ್ ಹಸನ್, ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದ ಮೂರನೇ ದಿನವಾದ ರವಿವಾರ ಈ ಸಾಧನೆ ಮಾಡಿದ್ದಾರೆ.
ಅಫ್ಘಾನಿಸ್ತಾನದ ಮೊದಲ ಇನಿಂಗ್ಸ್ನ 83ನೇ ಓವರ್ನಲ್ಲಿ ಬೌಲಿಂಗ್ ಮಾಡಿದ ಹಸನ್, ಮೊದಲಿಗೆ ಇಸ್ಮತ್ ಆಲಂ (1 ರನ್) ಅವರ ವಿಕೆಟ್ ಪಡೆದರು. ತಮ್ಮ ಮುಂದಿನ ಎಸೆತದಲ್ಲಿ ಹೊಸ ಬ್ಯಾಟರ್ ಅಹ್ಮದ್ (0) ಅವರ ವಿಕೆಟ್ ಉರುಳಿಸಿದರು. ಝೀಯಾವುರ್ರಹ್ಮಾನ್ (0) ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ಹಸನ್ ಹ್ಯಾಟ್ರಿಕ್ ಪೂರೈಸಿದರು.
ಹಸನ್ ಟೆಸ್ಟ್ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬಾಂಗ್ಲಾದೇಶದ ಮೂರನೇ ಬೌಲರ್ ಎನಿಸಿಕೊಂಡರು. ಸ್ಪಿನ್ನರ್ಗಳಾದ ಅಲೋಕ್ ಕಪಾಲಿ (2003ರಲ್ಲಿ ಪೇಶಾವರದಲ್ಲಿ ಪಾಕಿಸ್ತಾನದ ವಿರುದ್ಧ) ಹಾಗೂ ಸೊಹಾಗ್ ಗಾಝಿ (2013ರಲ್ಲಿ ಚಿತ್ತಗಾಂಗ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ) ಟೆಸ್ಟ್ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.
ಹಸನ್ ಮಹ್ಮೂದ್ 55 ರನ್ಗಳಿಗೆ ಐದು ವಿಕೆಟ್ಗಳ ಗೊಂಚಲು ಪಡೆದಿದ್ದು, ಬಾಂಗ್ಲಾದೇಶ ತಂಡವು ಅಫ್ಘಾನಿಸ್ತಾನವನ್ನು 240 ರನ್ಗಳಿಗೆ ಆಲೌಟ್ ಮಾಡಿ ಮೊದಲ ಇನಿಂಗ್ಸ್ನಲ್ಲಿ 106 ರನ್ಗಳ ಮುನ್ನಡೆ ಪಡೆಯಿತು.
ಎರಡನೇ ಇನಿಂಗ್ಸ್ನಲ್ಲಿ 3 ವಿಕೆಟ್ಗಳ ನಷ್ಟಕ್ಕೆ 210 ರನ್ ಗಳಿಸಿರುವ ಬಾಂಗ್ಲಾದೇಶ ತಂಡವು ಒಟ್ಟು 316 ರನ್ಗಳ ಮುನ್ನಡೆಯಲ್ಲಿದೆ.






