ಶ್ರೀಲಂಕಾದ ಟ್ವೆಂಟಿ-20 ತಂಡಕ್ಕೆ ಹಸರಂಗ ನಾಯಕ, ಏಕದಿನ ಕ್ರಿಕೆಟ್ ಗೆ ಮೆಂಡಿಸ್ ಸಾರಥ್ಯ

Photo: icc-cricket.com
ಹೊಸದಿಲ್ಲಿ: ಮುಂದಿನ ತಿಂಗಳು ಝಿಂಬಾಬ್ವೆ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಆಲ್ರೌಂಡರ್ ವನಿಂದು ಹಸರಂಗ ಟ್ವೆಂಟಿ-20 ತಂಡದ ನಾಯಕತ್ವವಹಿಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಪ್ರಕಟಿಸಿದೆ. ಇದೇ ವೇಳೆ ಬ್ಯಾಟರ್ ಕುಸಾಲ್ ಮೆಂಡಿಸ್ ಏಕದಿನ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಚರಿತ್ ಅಸಲಂಕ ಟ್ವೆಂಟಿ-20 ಹಾಗೂ ಏಕದಿನ ಕ್ರಿಕೆಟ್ ತಂಡದ ಉಪ ನಾಯಕನಾಗಿರುತ್ತಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಹಿರಂಗಪಡಿಸಿದೆ.
ಆಗಸ್ಟ್ನಲ್ಲಿ ಲಂಕಾ ಪ್ರೀಮಿಯರ್ ಲೀಗ್ ವೇಳೆ ಕಾಣಿಸಿಕೊಂಡ ಗಾಯದ ಸಮಸ್ಯೆಯಿಂದಾಗಿ ಏಶ್ಯಕಪ್ ಹಾಗೂ 50 ಓವರ್ಗಳ ವಿಶ್ವಕಪ್ ಟೂರ್ನಿಯಿಂದ ವಂಚಿತರಾಗಿದ್ದ ಹಸರಂಗ ಶ್ರೀಲಂಕಾ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಖಾಯಂ ನಾಯಕ ದಸುನ್ ಶನಕರಿಂದ ನಾಯಕತ್ವವಹಿಸಿಕೊಳ್ಳಲಿದ್ದಾರೆ.
ಜನವರಿ 6ರಿಂದ ಆರಂಭವಾಗಲಿರುವ ಝಿಂಬಾಬ್ವೆ ವಿರುದ್ಧದ ತಲಾ 3 ಪಂದ್ಯಗಳ ಏಕದಿನ ಹಾಗೂ ಟಿ-20 ಸರಣಿಯ ಪ್ರಾಥಮಿಕ ತಂಡಕ್ಕೆ ಶನಕ ಆಯ್ಕೆಯಾಗಿದ್ದಾರೆ.
ಶನಕ ಗಾಯದ ಸಮಸ್ಯೆಯಿಂದ ವಿಶ್ವಕಪ್ ಟೂರ್ನಿಯಿಂದ ಹೊರಗುಳಿದ ನಂತರ ಮೆಂಡಿಸ್ ಎರಡು ವಿಶ್ವಕಪ್ ಪಂದ್ಯಗಳಲ್ಲಿ ತಂಡದ ಸಾರಥ್ಯವನ್ನು ವಹಿಸಿದ್ದರು. ವಿಶ್ವಕಪ್ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಶ್ರೀಲಂಕಾ 9 ಪಂದ್ಯಗಳಲ್ಲಿ ಕೇವಲ 2ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿತ್ತು.
ಶ್ರೀಲಂಕಾವು ಮಾಜಿ ಆರಂಭಿಕ ಆಟಗಾರ ಉಪುಲ್ ತರಂಗ ನೇತೃತ್ವದ ನೂತನ ಆಯ್ಕೆ ಸಮಿತಿ ನೇಮಿಸಿದ್ದು, ಇದರಲ್ಲಿ ಮಾಜಿ ಆಟಗಾರ ಅಜಂತ ಮೆಂಡಿಸ್ ಇದ್ದಾರೆ. ಒಂದು ವರ್ಷದ ಅವಧಿಗೆ ಮಾಜಿ ನಾಯಕ ಹಾಗೂ ಬ್ಯಾಟಿಂಗ್ ದಿಗ್ಗಜ ಸನತ್ ಜಯಸೂರ್ಯರನ್ನು ಕ್ರಿಕೆಟ್ ಸಲಹೆಗಾರರನ್ನಾಗಿ ನೇಮಕ ಮಾಡಿದೆ.







