ಸೋಲಿನ ನಡುವೆಯೂ ದಾಖಲೆ ಸೃಷ್ಟಿಸಿದ ಹೆಟ್ಮಿಯರ್

PC: PTI
ಕೊಲ್ಕತ್ತಾ: ವಿಶ್ವ ಕ್ರಿಕೆಟ್ ನಲ್ಲಿ ಅತ್ಯಂತ ಸ್ಫೋಟಕ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಹೊಂದಿರುವ ವೆಸ್ಟ್ಇಂಡೀಸ್ ನ ಶಿಮ್ರಾನ್ ಹೆಟ್ಮಿಯರ್ ಟಿ20 ವಿಶ್ವಕಪ್ ನ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಒಂದೇ ಟ20 ವಿಶ್ವಕಪ್ ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಹೆಗ್ಗಳಿಕೆ ಇವರಿಗೆ ಸಂದಿದೆ. ಟೂರ್ನಿಯಲ್ಲಿ 19 ಸಿಕ್ಸರ್ ಸಿಡಿಸುವ ಮೂಲಕ ಈ ವಿಶಿಷ್ಟ ದಾಖಲೆ ಸ್ಥಾಪಿಸಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ರವಿವಾರ ನಡೆದ ಭಾರತ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಈ ಮೈಲುಗಲ್ಲು ಸ್ಥಾಪಿಸಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ ಹೆಟ್ಮಿಯರ್ 19 ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದರೆ, ಶಹೀಬ್ಝಾದಾ ಫರ್ಹಾನ್ (18), ನಿಕೋಲಸ್ ಪೂರನ್ (17), ಕ್ರಿಸ್ ಗೇಲ್ (16) ರಹಮತುಲ್ಲಾ ಗುರ್ಬಝ್ (16) ನಂತರದ ಸ್ಥಾನಗಳಲ್ಲಿದ್ದಾರೆ.
ಇದೇ ವಿಶ್ವಕಪ್ ನಲ್ಲಿ ಪಾಕಿಸ್ತಾನದ ಶಹೀಬ್ಝಾದಾ ಫರ್ಹಾನ್ ಸೃಷ್ಟಿಸಿದ್ದ ದಾಖಲೆಯನ್ನು ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಹೆಟ್ಮಿಯರ್ ಪುಡಿಗಟ್ಟಿದರು. ಈ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿರುವ ಫರ್ಹಾನ್ 37 ಬೌಂಡರಿ ಹಾಗೂ 18 ಸಿಕ್ಸರ್ಗಳೊಂದಿಗೆ 383 ರನ್ ಸಿಡಿಸಿದ್ದಾರೆ.
ಗರಿಷ್ಠ ರನ್ ಗಳಿಸಿದ ಬ್ಯಾಟ್ಸ್ಮನ್ ಗಳ ಪೈಕಿ ಹೆಟ್ಮಿಯರ್ ನಾಲ್ಕನೇ ಸ್ಥಾನದಲ್ಲಿದ್ದಾರೆ. 19 ಸಿಕ್ಸರ್ ಹಾಗೂ 16 ಬೌಂಡರಿಗಳೊಂದಿಗೆ ಹೆಟ್ಮಿಯರ್ 248 ರನ್ ಕಲೆ ಹಾಕಿದ್ದಾರೆ.






