ಪುರುಷರ ಹೈಜಂಪ್ | ಸತತ ಎರಡನೇ ಬೆಳ್ಳಿ ಗೆದ್ದ ನಿಶಾದ್ ಕುಮಾರ್

ನಿಶಾದ್ ಕುಮಾರ್ | PC : olympics.com
ಪ್ಯಾರಿಸ್ : ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್ನಲ್ಲಿ ಪುರುಷರ ಹೈಜಂಪ್ ಟಿ47 ವಿಭಾಗದಲ್ಲಿ ನಿಶಾದ್ ಕುಮಾರ್ ಸತತ ಎರಡನೇ ಬಾರಿ ಬೆಳ್ಳಿ ಪದಕ ಜಯಿಸಿ ಚಾರಿತ್ರಿಕ ಸಾಧನೆ ಮಾಡಿದರು. ನಿಶಾದ್ 3 ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ 2.06 ಮೀ.ದೂರಕ್ಕೆ ಜಿಗಿದು ಬೆಳ್ಳಿ ಗೆದ್ದಿದ್ದರು.
24ರ ಹರೆಯದ ನಿಶಾದ್ ರವಿವಾರ ತಡ ರಾತ್ರಿ ನಡೆದ ಹೈಜಂಪ್ ಫೈನಲ್ ಪಂದ್ಯದಲ್ಲಿ 2.04 ಮೀ.ಎತ್ತರಕ್ಕೆ ಜಿಗಿದು ಎರಡನೇ ಸ್ಥಾನ ಪಡೆದರು. ಈ ಮೂಲಕ ಭಾರತಕ್ಕೆ ಪ್ಯಾರಾ ಅತ್ಲೆಟಿಕ್ಸ್ ವಿಭಾಗದಲ್ಲಿ ಮೂರನೇ ಪದಕ ಗೆದ್ದುಕೊಟ್ಟರು.
ಪ್ರೀತಿ ಪಾಲ್ 200 ಮಿ. ಓಟದ ಟಿ35 ವಿಭಾಗದಲ್ಲಿ ವೈಯಕ್ತಿಕ ಶ್ರೇಷ್ಠ ಸಮಯ(30.01)ದಲ್ಲಿ ಗುರಿ ತಲುಪಿ ಒಂದೇ ಪ್ಯಾರಾಲಿಂಪಿಕ್ಸ್ನಲ್ಲಿ ಎರಡು ಪದಕ ಜಯಿಸಿದ ಭಾರತದ ಎರಡನೇ ಮಹಿಳಾ ಕ್ರೀಡಾಪಟು ಎನಿಸಿಕೊಂಡರು. ಅವನಿ ಲೇಖರ 3 ವರ್ಷಗಳ ಹಿಂದೆ ಟೋಕಿಯೊ ಗೇಮ್ಸ್ನಲ್ಲಿ ಚಿನ್ನ ಹಾಗೂ ಕಂಚು ಜಯಿಸಿದ್ದರು.
ನಿಶಾದ್ ಹೈಜಂಪ್ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ವೀರ ಹಾಗೂ ಚಾಂಪಿಯನ್ ಅಮೆರಿಕದ ಟೌನ್ಸೆಂಡ್ ರೊಡೆರಿಕ್ ರಿಂದ ತೀವ್ರ ಸ್ಪರ್ಧೆ ಎದುರಿಸಿದರು. ಟೌನ್ಸೆಂಡ್ 2.12 ಮೀ.ದೂರಕ್ಕೆ ಜಿಗಿದು ಚಿನ್ನ ಗೆದ್ದುಕೊಂಡರು. ತಟಸ್ಥ ಪ್ಯಾರಾಲಿಂಪಿಕ್ಸ್ ಅತ್ಲೀಟ್ ಮಾರ್ಗೀವ್ ಜಿಯೊರ್ಜಿ 2 ಮೀ. ಎತ್ತರಕ್ಕೆ ಜಿಗಿದು ಕಂಚು ಗೆದ್ದರು.
ಸ್ಪರ್ಧಾವಳಿಯಲ್ಲಿದ್ದ ಇನ್ನೋರ್ವ ಭಾರತೀಯ ರಾಮ್ ಪಾಲ್ 1.95 ಮೀ.ದೂರಕ್ಕೆ ಹಾರಿ ಜೀವನಶ್ರೇಷ್ಠ ಪ್ರದರ್ಶನ ನೀಡಿದರೂ 7ನೇ ಸ್ಥಾನ ಪಡೆದರು.
ನಿಶಾದ್ ಆರನೇ ವಯಸ್ಸಿನಲ್ಲಿ ಹುಲ್ಲು-ಕತ್ತರಿಸುವ ಯಂತ್ರಕ್ಕೆ ಬಲಗೈ ಸಿಲುಕಿದ ಪರಿಣಾಮ ಕೈ ಕಳೆದುಕೊಂಡಿದ್ದರು. ರಾಜ್ಯಮಟ್ಟದ ವಾಲಿಬಾಲ್ ಆಟಗಾರ್ತಿ ಹಾಗೂ ಡಿಸ್ಕಸ್ ಎಸೆತಗಾರ್ತಿಯಾಗಿರುವ ತಾಯಿಯಿಂದ ಪ್ರೇರಣೆ ಪಡೆದ ನಿಶಾದ್ ಕ್ರೀಡೆಯ ಮೇಲೆ ವ್ಯಾಮೋಹ ಬೆಳೆಸಿಕೊಂಡು ಜಾವೆಲಿನ್ ಎಸೆತದತ್ತ ಗಮನ ಹರಿಸುವ ಮೊದಲು ಕುಸ್ತಿ ಹಾಗೂ ಅತ್ಲೆಟಿಕ್ಸ್ನಲ್ಲಿ ತೊಡಗಿಸಿಕೊಂಡಿದ್ದರು.
2017ರಲ್ಲಿ ವೈಯಕ್ತಿಕ ತರಬೇತಿ ಪಡೆದ ನಿಶಾದ್ ಏಶ್ಯನ್ ಯೂತ್ ಪ್ಯಾರಾ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಕಳೆದ ವರ್ಷ ಪ್ಯಾರಾ ಏಶ್ಯನ್ ಗೇಮ್ಸ್ನಲ್ಲೂ ಚಿನ್ನ ಜಯಿಸಿದ್ದರು. ಜಪಾನ್ನಲ್ಲಿ ನಡೆದ 2024ರ ವರ್ಲ್ಡ್ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.







