ಹಾಕಿ ಏಶ್ಯಕಪ್: ಕಝಕ್ಸ್ತಾನದ ವಿರುದ್ಧ ಗೋಲಿನ ಸುರಿಮಳೆಗೈದ ಭಾರತ

Photo : X.com /@TheHockeyIndia
ಪಾಟ್ನಾ, ಸೆ.1: ಪುರುಷರ ಏಶ್ಯ ಕಪ್ ನಲ್ಲಿ ಸೋಮವಾರ ನಡೆದ ತನ್ನ ಕೊನೆಯ ‘ಎ’ ಗುಂಪಿನ ಪಂದ್ಯದಲ್ಲಿ ಗೋಲಿನ ಸುರಿಮಳೆಗೈದ ಆತಿಥೇಯ ಭಾರತ ತಂಡವು ಕಝಕ್ಸ್ತಾನ ತಂಡವನ್ನು 15-0 ಗೋಲುಗಳ ಅಂತರದಿಂದ ಮಣಿಸಿದೆ. ಈ ಮೂಲಕ ಟೂರ್ನಿಯಲ್ಲಿ ಸತತ 3ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ.
ಅಭಿಷೇಕ್ ಹಾಗೂ ಸುಖಜೀತ್ ಸಿಂಗ್ ಆರಂಭದಲ್ಲಿ ಗಳಿಸಿದ ಗೋಲು ನೆರವಿನಿಂದ ಭಾರತವು ತಕ್ಷಣವೇ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ವಿವೇಕ್ ಸಾಗರ್, ದಿಲ್ಜೀತ್ ಸಿಂಗ್ ಫೀಲ್ಡ್ ಗೋಲುಗಳನ್ನು ದಾಖಲಿಸಿದರೆ, ಸಂಜಯ್ ಪೆನಾಲ್ಟಿ ಕಾರ್ನರ್ ರನ್ನು ಗೋಲಾಗಿ ಪರಿವರ್ತಿಸಿ ಭಾರತದ ಮುನ್ನಡೆಯನ್ನು ಹಿಗ್ಗಿಸಿದರು.
ಅಭಿಷೇಕ್ 4 ಗೋಲುಗಳನ್ನು ಗಳಿಸಿದರೆ, ಸುಖಜೀತ್ ಹಾಗೂ ಜುಗ್ರಾಜ್ ಹ್ಯಾಟ್ರಿಕ್ ಗೋಲು ಗಳಿಸಿದರು. ಹರ್ಮನ್ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ರಾಜಿಂದರ್ ಸಿಂಗ್, ಸಂಜಯ್ ಹಾಗೂ ದಿಲ್ಪ್ರೀತ್ ಸಿಂಗ್ ತಲಾ ಒಂದು ಗೋಲು ಗಳಿಸಿ ತಂಡದ ಭರ್ಜರಿ ಗೆಲುವಿಗೆ ನೆರವಾದರು.
ಜುಗ್ರಾಜ್ ಸಿಂಗ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಭಾರತದ 3ನೇ ಆಟಗಾರ ಎನಿಸಿಕೊಂಡರು.
ಎಲ್ಲ 4 ಕ್ವಾರ್ಟರ್ಗಳಲ್ಲಿ ಪ್ರಾಬಲ್ಯ ಸಾಧಿಸಿದ ಭಾರತವು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡಿತು. ಕಝಕ್ಸ್ತಾನದ ರಕ್ಷಣಾ ಕೋಟೆಯನ್ನು ಭೇದಿಸಿತು.
ಜಪಾನ್ ವಿರುದ್ಧ 2ನೇ ಪಂದ್ಯವನ್ನು 3-2 ಅಂತರದಿಂದ ರೋಚಕವಾಗಿ ಗೆದ್ದಿರುವ ಭಾರತವು ಈಗಾಗಲೇ ಟೂರ್ನಿಯಲ್ಲಿ ಸೂಪರ್-4 ಹಂತಕ್ಕೆ ಅರ್ಹತೆ ಪಡೆದಿದೆ.







