ಎಫ್ಐಎಚ್ ಪ್ರೊ ಲೀಗ್ನಿಂದ ಹೊರಬಿದ್ದ ಭಾರತೀಯ ಮಹಿಳಾ ಹಾಕಿ ತಂಡ

Photo: Hockey India
ಬರ್ಲಿನ್: ಎಫ್ಐಎಚ್ ಪ್ರೊ ಲೀಗ್ ಹಾಕಿ ಪಂದ್ಯಾವಳಿಯಿಂದ ಭಾರತೀಯ ಮಹಿಳಾ ಹಾಕಿ ತಂಡ ರವಿವಾರ ಹೊರಬಿದ್ದಿದೆ. ಪಂದ್ಯಾವಳಿಯ ಹಾಲಿ ಋತುವಿನ ತನ್ನ ಕೊನೆಯ ಪಂದ್ಯವನ್ನು ಆಡುವ ಮೊದಲೇ ಇದು ದೃಢಪಟ್ಟಿತು. ಇನ್ನೊಂದು ಪಂದ್ಯದಲ್ಲಿ ಜರ್ಮನಿಯು ಇಂಗ್ಲೆಂಡನ್ನು 4-2 ಗೋಲುಗಳಿಂದ ಸೋಲಿಸಿದ ಬಳಿಕ ಭಾರತವು ಪಂದ್ಯಾವಳಿಯಿಂದ ಹೊರಬಿತ್ತು.
ಸಲೀಮಾ ಟೇಟೆ ನೇತೃತ್ವದ ತಂಡವು ಪಂದ್ಯಾವಳಿಯ ತನ್ನ ಕೊನೆಯ ಪಂದ್ಯವನ್ನು ಚೀನಾ ವಿರುದ್ಧ ಆಡಲಿದೆ.
ಭಾರತವು ತನ್ನ 15 ಪಂದ್ಯಗಳಿಂದ 10 ಅಂಕಗಳನ್ನು ಗಳಿಸಿ ಒಂಭತ್ತು ತಂಡಗಳ ಪೈಕಿ ಕೊನೆಯ ಸ್ಥಾನದಲ್ಲಿದೆ. ಪ್ರೊ ಲೀಗ್ ನ ಮುಂದಿನ ಆವೃತ್ತಿಯಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಭಾರತ ಹೊಂದಬೇಕಾದರೆ, ಜರ್ಮನಿ ವಿರುದ್ಧದ ಪಂದ್ಯವನ್ನು ಇಂಗ್ಲೆಂಡ್ ಗೆಲ್ಲಬೇಕಾಗಿತ್ತು.
ಪಂದ್ಯಾವಳಿಯಲ್ಲಿ ಮುಂದುವರಿಯಲು ಜರ್ಮನಿಯು ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿದ್ದರೂ ಸಾಕಿತ್ತು. ಆದರೆ, ಸ್ಟೈನ್ ಕರ್ಝ್ರ ಅವಳಿ ಗೋಲುಗಳು ಹಾಗೂ ನಾಯಕಿ ಲೀಸಾ ನೋಲ್ಟ್ ಮತ್ತು ಜೊಹಾನಾ ಹ್ಯಾಶನ್ಬರ್ಗ್ರ ಗೋಲುಗಳ ನೆರವಿನಿಂದ ಜರ್ಮನಿಯು ಇಂಗ್ಲೆಂಡನ್ನು 4-2 ಗೋಲುಗಳ ಅಂತರದಿಂದ ಸೋಲಿಸಿತು.
ಇದರೊಂದಿಗೆ 16 ಅಂಕಗಳೊಂದಿಗೆ ಜರ್ಮನಿಯು ಏಳನೇ ಸ್ಥಾನವನ್ನು ಸಂಪಾದಿಸಿದರೆ, ಇಂಗ್ಲೆಂಡ್ 14 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.
ಇನ್ನು ಎಫ್ಐಎಚ್ ನೇಶನ್ಸ್ ಕಪ್ನ ಮುಂದಿನ ಆವೃತ್ತಿಯಲ್ಲಿ ಭಾರತವು ಆಡಲಿದೆ. ಆ ಪಂದ್ಯಾವಳಿಯ ವಿಜೇತ ತಂಡವು 2026-27ರ ಎಫ್ಐಎಚ್ ಪ್ರೊ ಲೀಗ್ ಆವೃತ್ತಿಯಲ್ಲಿ ಸ್ಥಾನ ಪಡೆಯಲಿದೆ.







