ಜರ್ಸಿ ಬಣ್ಣವನ್ನು ಕೇಸರಿಯಿಂದ ಮತ್ತೆ ನೀಲಿ ಬಣ್ಣಕ್ಕೆ ಬದಲಿಸಿದ ಹಾಕಿ ಇಂಡಿಯಾ

Photo credit: Hockey India
ಹೊಸದಿಲ್ಲಿ: ಮುಂಬರುವ ಜಪಾನ್ನಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ಗೆ ಪುರುಷರ ಹಾಗೂ ಮಹಿಳೆಯರ ತಂಡಗಳು ತಮ್ಮ ಸಾಂಪ್ರದಾಯಿಕ ನೀಲಿ ಬಣ್ಣದ ಜರ್ಸಿಗೆ ಮರಳಲು ಸಜ್ಜಾಗಿವೆ. ಹಾಕಿ ಇಂಡಿಯಾವು ತನ್ನ ವಿವಾದಾತ್ಮಕ ನಿರ್ಧಾರವನ್ನು ಹಿಂಪಡೆದಿದೆ.
ನೆದರ್ಲ್ಯಾಂಡ್ಸ್ ಹಾಗೂ ಬೆಲ್ಜಿಯಮ್ನಲ್ಲಿ ಇತ್ತೀಚೆಗೆ ನಡೆದಿದ್ದ ಎಫ್ಐಎಚ್ ಹಾಕಿ ವಿಶ್ವಕಪ್ನಲ್ಲಿ ಕೇಸರಿ ಕಿಟ್ಗಳು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಹಾಕಿ ಇಂಡಿಯಾವು ವಿಶ್ವಕಪ್ ಟೂರ್ನಿಗಿಂತ ಮೊದಲು ತನ್ನ ದೀರ್ಘಕಾಲದ ನೀಲಿ ಬಣ್ಣದ ಜರ್ಸಿಯ ಬದಲಿಗೆ ಕೇಸರಿ ಬಣ್ಣವನ್ನು ಧರಿಸಲು ನಿರ್ಧರಿಸಿತ್ತು.
ಹಾಕಿ ತಂಡಗಳ ಜರ್ಸಿ ಬಣ್ಣದ ಬದಲಾವಣೆಗೆ ಮಾಜಿ ನಾಯಕರಾದ ಪರ್ಗತ್ ಸಿಂಗ್, ಧನರಾಜ್ ಪಿಳ್ಳೈ, ಅಜಿತ್ ಪಾಲ್ ಸಿಂಗ್ ಹಾಗೂ ವೀರೇನ್ ರಸ್ಕಿನ್ಹಾರಿಂದ ತೀವ್ರ ಟೀಕೆಗಳು ಕೇಳಿಬಂದವು. ತನ್ನ ಗಮನಕ್ಕೆ ತರದೆ ಜರ್ಸಿ ಬಣ್ಣ ಬದಲಿಸಲಾಗಿದೆ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ದಿಲಿಪ್ ತಿರ್ಕಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರೊಂದಿಗೆ ಹಾಕಿ ಒಕ್ಕೂಟದಲ್ಲಿ ಇದೇ ವಿಚಾರಕ್ಕೆ ಆಂತರಿಕ ಕಲಹವೂ ಭುಗಿಲೆದ್ದಿತ್ತು. ಇದೀಗ ತಂಡಗಳು ಏಶ್ಯನ್ ಗೇಮ್ಸ್ಗೆ ತಯಾರಿ ನಡೆಸುತ್ತಿದ್ದು, ನೀಲಿ ಮತ್ತೊಮ್ಮೆ ಮೊದಲ ಆಯ್ಕೆಯ ಬಣ್ಣವಾಗಿದ್ದು, ಕೇಸರಿ ಎರಡನೇ ಆಯ್ಕೆಯಾಗಿದೆ.






