ಹಾಂಕಾಂಗ್ ಓಪನ್: ಸಿಂಧುಗೆ ಸೋಲು, ಪ್ರಣಯ್, ಲಕ್ಷ್ಯಗೆ ಮುನ್ನಡೆ

ಪಿ.ವಿ. ಸಿಂಧು | PC : X
ಹಾಂಕಾಂಗ್, ಸೆ.10: ಒಲಿಂಪಿಕ್ಸ್ ನಲ್ಲಿ ಎರಡು ಬಾರಿ ಪದಕ ವಿಜೇತೆ ಭಾರತದ ಆಟಗಾರ್ತಿ ಪಿ.ವಿ. ಸಿಂಧು, ಹಾಂಕಾಂಗ್ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಡೆನ್ಮಾರ್ಕ್ನ ಶ್ರೇಯಾಂಕರಹಿತ ಆಟಗಾರ್ತಿ ಲೈನ್ ಕ್ರಿಸ್ಟೋಫರ್ಸೆನ್ ವಿರುದ್ಧ 3 ಗೇಮ್ ಗಳ ಅಂತರದಿಂದ ಸೋಲನುಭವಿಸಿ ನಿರ್ಗಮಿಸಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ 32ರ ಸುತ್ತಿನ ಪಂದ್ಯದಲ್ಲಿ ಸಿಂಧು ಅವರು 21-15, 16-21, 19-21 ಗೇಮ್ಗಳ ಅಂತರದಿಂದ ಸೋತಿದ್ದಾರೆ. ಡೆನ್ಮಾರ್ಕ್ ಆಟಗಾರ್ತಿಯ ವಿರುದ್ಧ ಈ ಹಿಂದೆ 5 ಪಂದ್ಯಗಳನ್ನು ಜಯಿಸಿದ್ದ ಸಿಂಧು ಇದೀಗ ಮೊದಲ ಬಾರಿ ಸೋತಿದ್ದಾರೆ.
ಭಾರತದ ಸ್ಟಾರ್ ಆಟಗಾರ್ತಿ ಸಿಂಧು ಈ ವರ್ಷಾರಂಭದಲ್ಲಿ ಸ್ವಿಸ್ ಓಪನ್ ಹಾಗೂ ಜಪಾನ್ ಓಪನ್ ಟೂರ್ನಿಯಲ್ಲಿ ಬೇಗನೆ ನಿರ್ಗಮಿಸಿದ ನಂತರ ತನ್ನ ಮೊದಲಿನ ಲಯ ಕಂಡುಕೊಳ್ಳಲು ಆರಂಭಿಸಿದ್ದರು.
ಮೊದಲ ಗೇಮ್ ಅನ್ನು 21-15 ಅಂತರದಿಂದ ಗೆದ್ದುಕೊಂಡಿರುವ ಸಿಂಧು ಉತ್ತಮ ಆರಂಭ ಪಡೆದಿದ್ದರು. ಆದರೆ 2ನೇ ಹಾಗೂ 3ನೇ ಗೇಮ್ನಲ್ಲಿ ಮುಗ್ಗರಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.
ಇದೇ ವೇಳೆ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಎಚ್.ಎಸ್.ಪ್ರಣಯ್ ಹಾಗೂ ಲಕ್ಷ್ಯ ಸೇನ್ ಪ್ರಿ-ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದಾರೆ.
ವಿಶ್ವದ 34ನೇ ರ್ಯಾಂಕಿನ ಆಟಗಾರ ಪ್ರಣಯ್ ಅವರು 44 ನಿಮಿಷಗಳ ತನಕ ನಡೆದ ಅಂತಿಮ-32ರ ಸುತ್ತಿನ ಪಂದ್ಯದಲ್ಲಿ ಚೀನಾದ ಗ್ವಾಂಗ್ ಝು ಅವರನ್ನು 21-17, 21-14 ನೇರ ಗೇಮ್ ಗಳ ಅಂತರದಿಂದ ಮಣಿಸಿದರು.
ವಿಶ್ವ ಚಾಂಪಿಯನ್ಶಿಪ್ನಲ್ಲಿ ಈ ಹಿಂದೆ ಪದಕ ಜಯಿಸಿದ್ದ ಲಕ್ಷ್ಯ ಸೇನ್ ಕೂಡ ವಾಂಗ್ ವಿರುದ್ದ ಅಂತಿಮ-32ರ ಪಂದ್ಯದಲ್ಲಿ 22-20, 16-21, 21-15 ಗೇಮ್ಗಳ ಅಂತರದಿಂದ ಜಯಶಾಲಿಯಾಗಿ ಅಂತಿಮ-16ರ ಸುತ್ತು ತಲುಪಿದರು.
ಕಿರಣ್ ಜಾರ್ಜ್ ಅವರು ಕೇವಲ 34 ನಿಮಿಷಗಳಲ್ಲಿ ಸಿಂಗಾಪುರದ ಗರಿಷ್ಠ ರ್ಯಾಂಕಿನ ಜಿಯಾ ಹೆಂಗ್ ಜೇಸನ್ರನ್ನು 21-16, 21-11 ಗೇಮ್ ಗಳ ಅಂತರದಿಂದ ಸೋಲಿಸಿದರು.
ಡಬಲ್ಸ್ನಲ್ಲಿ ಪಾಂಡಾ ಸಹೋದರಿಯರಾದ-ಋತುಪರ್ಣ ಹಾಗೂ ಶ್ವೇತಪರ್ಣ 28 ನಿಮಿಷಗಳ ಪಂದ್ಯದಲ್ಲಿ ಹಾಂಕಾಂಗ್ನ ಕಿ ವನೆಸ್ಸಾ ಪಾಂಗ್ ಹಾಗೂ ಸಮ್ ಯವು ವಾಂಗ್ ಎದುರು 17-21, 9-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಮಿಕ್ಸೆಡ್ ಡಬಲ್ಸ್ ನಲ್ಲಿ ಧ್ರುವ ಕಪಿಲ್ ಹಾಗೂ ತನಿಶಾ ಕ್ರಾಸ್ಟೊ ಅವರು ಚೈನೀಸ್ ತೈಪೆಯ ಚೆನ್ ಚೆಂಗ್ ಕುಯಾನ್ ಹಾಗೂ ಸು ಯಿನ್-ಹುಯ್ ವಿರುದ್ಧ 16-21, 11-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.







