ಮೀರಾಬಾಯಿ ಒಬ್ಬರೇ ನಮಗಾಗಿ ಎಷ್ಟು ಸಮಯ ಪದಕ ಗೆಲ್ಲುತ್ತಾರೆ: ಕ್ರೀಡಾ ಸಚಿವ ಮಾಂಡವೀಯ ಪ್ರಶ್ನೆ
ಏಶ್ಯನ್ ಗೇಮ್ಸ್ ಪ್ರದರ್ಶನ ಪರಿಶೀಲಿಸಿದ ಕ್ರೀಡಾ ಸಚಿವಾಲಯ

ಮೀರಾಬಾಯಿ , ಮನ್ಸುಖ್ ಮಾಂಡವೀಯ | Photo Credit : PTI
ಹೊಸದಿಲ್ಲಿ: ಏಶ್ಯನ್ ಗೇಮ್ಸ್ನಲ್ಲಿ ಭಾರತದ ಪ್ರದರ್ಶನದ ಕುರಿತು ಗುರುವಾರ ಕ್ರೀಡಾ ಸಚಿವಾಲಯವು ಪರಿಶೀಲನೆ ನಡೆಸಿದ್ದು, ಸಭೆಯಲ್ಲಿ ಅತ್ಲೆಟಿಕ್ಸ್ ಹಾಗೂ ಬ್ಯಾಡ್ಮಿಂಟನ್ನಂತಹ ಕ್ರೀಡೆಗಳಲ್ಲಿ ದೇಶದ ಕಳಪೆ ಪದಕ ಗಳಿಕೆಯು ಚರ್ಚೆಗೆ ಗ್ರಾಸವಾಯಿತು.
ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ(ಎನ್ಎಸ್ಎಫ್)ಜೊತೆಗಿನ ಸಭೆಯಲ್ಲಿ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಐಚಿ-ನಗೋಯವನ್ನು ತಲುಪಿದ ನಂತರ ಕ್ರೀಡಾಪಟುಗಳಿಗೆ ಆಗಿರುವ ಗಾಯಗಳು ಹಾಗೂ ಕೆಲವು ಪ್ರಮುಖ ಕ್ರೀಡಾಪಟುಗಳ ನಿರಾಶಾದಾಯಕ ಪ್ರದರ್ಶನದ ಬಗ್ಗೆ ಪ್ರಶ್ನಿಸಿದರು.
ಏಶ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡವು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಿತು. ಕೊನೆಯ ಎರಡು ದಿನಗಳಲ್ಲಿ ಗೆದ್ದ ಹಲವು ಚಿನ್ನದ ಪದಕಗಳ ನೆರವಿನಿಂದ ಭಾರತ ನಾಲ್ಕನೇ ಸ್ಥಾನಕ್ಕೇರಿತ್ತು. ಈ ವರ್ಷದ ಏಶ್ಯನ್ ಕ್ರೀಡಾಕೂಟದಲ್ಲಿ ಭಾರತ ತಂಡ ಒಟ್ಟು 85 ಪದಕಗಳನ್ನು (21 ಚಿನ್ನದ ಪದಕಗಳ ಸಹಿತ)ಗೆದ್ದುಕೊಂಡಿತು. ಇದು ಚೀನಾದ ಹಾಂಗ್ಝೌನಲ್ಲಿ ನಡೆದಿದ್ದ ಹಿಂದಿನ ಆವೃತ್ತಿಯಲ್ಲಿ ಭಾರತ ಗೆದ್ದಿರುವ 106 ಪದಕಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.
ಈ ಸಭೆಯಲ್ಲಿ ಕ್ರೀಡಾ ಖಾತೆಯ ರಾಜ್ಯ ಸಚಿವೆ ರಕ್ಷಾ ಖಡ್ಸೆ, ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್(ಐಒಎ)ಅಧ್ಯಕ್ಷೆ ಪಿ.ಟಿ. ಉಷಾ, ಕ್ರೀಡಾ ಕಾರ್ಯದರ್ಶಿ ಹರಿ ರಂಜನ್ ರಾವ್ ಹಾಗೂ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕ್ರೀಡಾ ಪ್ರದರ್ಶನದ ವಿಷಯದಲ್ಲಿ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ಸಚಿವರು ಕರೆ ನೀಡಿದರು. ಭಾರತದ ಕ್ರೀಡಾ ಶ್ರೇಷ್ಠತೆಯನ್ನು ಕಾಯ್ದುಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಉತ್ತಮ ಸಮನ್ವಯದೊಂದಿಗೆ ಕೆಲಸ ಮಾಡಬೇಕಾದ ಅಗತ್ಯವನ್ನು ಅವರು ಪುನರುಚ್ಚರಿಸಿದರು.
ಕೇವಲ ಬೆರಳೆಣಿಕೆಯಷ್ಟು ಪದಕ ವಿಜೇತರನ್ನೇ ಅವಲಂಬಿಸುವ ಬದಲು ಭಾರತಕ್ಕೆ ನಿರಂತರವಾಗಿ ಹೊಸ ಕ್ರೀಡಾಪಟುಗಳು ಸಿದ್ದಗೊಳ್ಳುವ ವ್ಯವಸ್ಥೆಯ ಅಗತ್ಯವಿದೆ ಎಂದು ಮಾಂಡವೀಯ ಒತ್ತಿ ಹೇಳಿದರು.
‘‘ಮೀರಾಬಾಯಿ ಚಾನು ಒಬ್ಬರೇ ನಮಗಾಗಿ ಎಷ್ಟು ಸಮಯ ಪದಕಗಳನ್ನು ಗೆಲ್ಲುತ್ತಿರುತ್ತಾರೆ? ನಮಗೆ ಇಂತಹ ಇನ್ನೂ 10 ಮಂದಿ ಮೀರಾಬಾಯಿ ಚಾನುಗಳು ಬೇಕಾಗಿದ್ದಾರೆ. ಪ್ರತಿಯೊಂದು ಕ್ರೀಡಾ ಒಕ್ಕೂಟವೂ ಈ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಬೇಕು. ನಾವು ಪ್ರತಿಭೆಗಳನ್ನು ಗುರುತಿಸಿ, ಸೂಕ್ತ ತರಬೇತಿ ಒದಗಿಸಬೇಕು. ಕ್ರೀಡಾಪಟುಗಳು ಅತ್ಯುನ್ನತ ಹಂತಕ್ಕೆ ಏರಲು ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕು’’ ಎಂದು ಕ್ರೀಡಾ ಸಚಿವರು ಸಲಹೆ ನೀಡಿದರು.
ಈ ಕ್ರೀಡಾಕೂಟದ ಸಂದರ್ಭದಲ್ಲಿ ಹರ್ಡಲ್ಸ್ ಆಟಗಾರ್ತಿ ಜ್ಯೋತಿ ಯಾರಾಜಿ, ಟ್ರಿಪಲ್ ಜಂಪರ್ ಪ್ರವೀಣ್ ಚಿತ್ರವೇಲ್ ಅವರಂತಹ ಕ್ರೀಡಾಪಟುಗಳಿಗೆ ಉಂಟಾದ ಗಾಯದ ವಿಷಯ ಬೆಳಕಿಗೆ ಬಂದಿತ್ತು. ಭಾರತದ ಅತ್ಲೆಟಿಕ್ಸ್ ಒಕ್ಕೂಟದ ಸಲಹೆಗಾರ ಆದಿಲ್ ಸುಮರಿವಾಲಾ ತಮ್ಮ ಕಾರ್ಯಕ್ಷಮತೆಯ ವಿಶ್ಲೇಷಣೆ ಮಂಡಿಸಿದಾಗ ಪಿ.ಟಿ. ಉಷಾ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.
2026ರ ಏಶ್ಯನ್ ಕ್ರೀಡಾಕೂಟದ ಜೊತೆಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್, 2030ರ ಕಾಮನ್ವೆಲ್ತ್ ಕ್ರೀಡಾಕೂಟ ಹಾಗೂ ದೋಹಾದಲ್ಲಿ ನಡೆಯಲಿರುವ 2030ರ ಏಶ್ಯನ್ ಕ್ರೀಡಾಕೂಟಕ್ಕಾಗಿ ಕೈಗೊಂಡಿರುವ ಸಿದ್ಧತೆಗಳನ್ನು ಮೌಲ್ಯಮಾಪನ ಮಾಡಲು ಈ ವೇದಿಕೆಯನ್ನು ಬಳಸಿಕೊಳ್ಳಲಾಯಿತು.






