ಐಪಿಎಲ್ ಟಿಕೆಟ್ ಗಳ ಮೇಲಿನ ಜಿಎಸ್ಟಿ ಭಾರೀ ಹೆಚ್ಚಳ!

ಸಾಂದರ್ಭಿಕ ಚಿತ್ರ | PC : X
ಹೊಸದಿಲ್ಲಿ, ಸೆ.4: ಕೇಂದ್ರ ಸರಕಾರವು ಐಪಿಎಲ್ ಟಿಕೆಟ್ ಗಳ ಮೇಲಿನ ಸರಕು ಹಾಗೂ ಸೇವಾ ತೆರಿಗೆಯನ್ನು(ಜಿಎಸ್ಟಿ) ಶೇ. 28ರಿಂದ 40 ಕ್ಕೆ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಗಳನ್ನು ಮೈದಾನದೊಳಗೆ ನೋಡುವುದು ಇನ್ನು ಮುಂದೆ ದುಬಾರಿಯಾಗಲಿದೆ.
1,000 ರೂ. ಮೂಲ ಬೆಲೆ ಹೊಂದಿರುವ ಟಿಕೆಟ್ ನ ಅಂತಿಮ ದರ 1,280ರಿಂದ 1,400ರೂ.ಗೆ ಏರಿಕೆಯಾಗಲಿದೆ.
ಕ್ಯಾಸಿನೋಗಳು, ರೇಸ್ ಕ್ಲಬ್ಗಳೊಂದಿಗೆ ಐಪಿಎಲ್ ಪಂದ್ಯಗಳನ್ನು ಭಾರತದ ಗರಿಷ್ಠ ಜಿಎಸ್ಟಿ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದರಿಂದ ಟಿಕೆಟ್ ದರ ಏರಿಕೆಯಾಗಿದೆ.
ದೇಶದಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ವೀಕ್ಷಿಸಲು ಹೋಗುವವರಿಗೆ ಸ್ವಲ್ಪ ಮಟ್ಟಿನ ನಿರಾಳತೆ ಸಿಗುವ ಸಾಧ್ಯತೆಯಿದೆ. ಆ ಪಂದ್ಯಗಳ ಟಿಕೆಟ್ ಗಳಿಗೆ ವಿಧಿಸಲಾಗಿರುವ ಜಿಎಸ್ಟಿ, ಐಪಿಎಲ್ ಟಿಕೆಟ್ಗಳಂತೆಯೇ 28 ಶೇ. ಇತ್ತು. ಆದರೆ ಈ ಸ್ಲ್ಯಾಬ್ ಗಳನ್ನು ರದ್ದುಗೊಳಿಸಲಾಗಿದೆ.
ಪ್ರಸ್ತುತ ಇತರ ಮಾನ್ಯತೆ ಪಡೆದ ಕ್ರೀಡಾಕೂಟಗಳಲ್ಲಿ 500 ರೂ. ಗಿಂತ ಹೆಚ್ಚಿನ ಟಿಕೆಟ್ ಗಳಿಗೆ ಶೇ.18 ಜಿಎಸ್ಟಿ ವಿಧಿಸಲಾಗುತ್ತಿದೆ. 500 ರೂ.ಗಿಂತ ಕಡಿಮೆ ಬೆಲೆಯ ಟಿಕೆಟ್ ಗಳನ್ನು ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ. ಹೀಗಾಗಿ ಅಂತರರಾಷ್ಟ್ರೀಯ ಪಂದ್ಯಗಳು ಹಾಗೂ ಇತರ ರಾಜ್ಯ ಲೀಗ್ ಗಳ ಟಿಕೆಟ್ ಗಳು ಮುಂದಿನ ದಿನಗಳಲ್ಲಿ ಅಗ್ಗವಾಗಬಹುದು.
ಭಾರತದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವಾದ ಮಹಿಳಾ ವಿಶ್ವಕಪ್ ಆರಂಭವಾಗುವ ಒಂದು ವಾರದ ಮೊದಲು ಸೆ.22ರಿಂದ ಬದಲಾವಣೆಗಳು ಜಾರಿಗೆ ಬರಲಿವೆ.







