ಭಾರತದ ಅಂಡರ್-19 ಟಿ-20 ವಿಶ್ವಕಪ್ ವಿಜೇತ ಮಹಿಳಾ ತಂಡದ ಸದಸ್ಯರನ್ನು ಗೌರವಿಸಿದ ಹೈದರಾಬಾದ್ ಕ್ರಿಕೆಟ್ ಸಂಸ್ಥೆ

PC : PTI
ಹೊಸದಿಲ್ಲಿ: ಕೌಲಾಲಂಪುರದಲ್ಲಿ ಇತ್ತೀಚೆಗೆ ಕೊನೆಗೊಂಡಿರುವ ಅಂಡರ್-19 ಮಹಿಳೆಯರ ಟಿ20 ವಿಶ್ವಕಪ್ನಲ್ಲಿ ‘ಸರಣಿ ಶ್ರೇಷ್ಠ’ ಹಾಗೂ ಫೈನಲ್ ಪಂದ್ಯದಲ್ಲಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾಗಿದ್ದ ಜಿ.ತ್ರಿಶಾ ಮಂಗಳವಾರ ಬೆಳಗ್ಗೆ ಹೈದರಾಬಾದ್ಗೆ ಆಗಮಿಸಿದಾಗ ಭವ್ಯ ಸ್ವಾಗತ ನೀಡಲಾಯಿತು.
ತ್ರಿಶಾ ಅವರೊಂದಿಗೆ ಮುಖ್ಯ ಕೋಚ್ ನೂಶಿನ್ ಅಲ್ ಖಾದೀರ್ ಹಾಗೂ ತಂಡದ ಇತರ ಸದಸ್ಯರಿದ್ದರು.
‘‘ಅದ್ಭುತ ಹಾಗೂ ಸ್ಫೂರ್ತಿದಾಯಕ ಸಾಧನೆ’’ ತೋರಿರುವ ಆಟಗಾರ್ತಿಯರಿಗೆ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ(ಎಚ್ಸಿಎ)ಅಧ್ಯಕ್ಷ ಎ.ಜಗನ್ ಮೋಹನ್ ರಾವ್ ಸ್ವಾಗತಿಸಿ, ಸನ್ಮಾನಿಸಿದರು. ತ್ರಿಶಾ ಅವರೊಂದಿಗೆ ಧ್ರುತಿ ಹಾಗೂ ಟ್ರೈನರ್ ಶಾಲಿನಿ ಕೂಡ ಹೈದರಾಬಾದ್ಗೆ ಆಗಮಿಸಿದ್ದಾರೆ.
‘‘ತ್ರಿಶಾ ಅವರ ಯಶೋಗಾಥೆ ಯುವತಿಯರು ಕ್ರಿಕೆಟ್ ಹಾಗೂ ಕ್ರೀಡೆಗಳಲ್ಲಿ ಹೆಚ್ಚಿನ ಉತ್ಸಾಹ ಹಾಗೂ ಬದ್ಧತೆಯಿಂದ ಆಯ್ದುಕೊಳ್ಳಲು ಪ್ರೇರೇಪಿಸುತ್ತದೆ. ಈ ವಿಶ್ವಕಪ್ ವಿಜೇತ ತಂಡದ ತರಬೇತುದಾರ ನೂಶಿನ್ ಹೈದರಾಬಾದ್ ಮೂಲದವರು ಎಂಬುದು ಗಮನಾರ್ಹವಾಗಿದೆ’’ ಎಂದು ಎಚ್ಸಿಎ ಅಧ್ಯಕ್ಷ ರಾವ್ ಹೇಳಿದ್ದಾರೆ.
‘‘ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯನ್ನು ಗೌರವಿಸಲು ಎಚ್ಸಿಎ ಅತಿ ಶೀಘ್ರದಲ್ಲೇ ಅಧಿಕೃತವಾಗಿ ಸನ್ಮಾನ ಸಮಾರಂಭವನ್ನು ಆಯೋಜಿಸಲಿದೆ’’ ಎಂದು ರಾವ್ ತಿಳಿಸಿದ್ದಾರೆ.
‘‘ಅಂಡರ್-19 ವಿಶ್ವಕಪ್ ಅನ್ನು ಎರಡು ಬಾರಿ ಗೆದ್ದಿರುವ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ತಂಡದ ಯಶಸ್ಸಿಗೆ ನಾನು ಗಣನೀಯ ಕೊಡುಗೆ ನೀಡಲು ಸಾಧ್ಯವಾದ ಕಾರಣ ಈ ಗೆಲುವು ವಿಶೇಷವಾಗಿದೆ. ರಾಷ್ಟ್ರೀಯ ತಂಡದ ಸಹಾಯಕ ಕೋಚ್ ಹಾಗೂ ಕೆ.ಜಾನ್ ಮನೋಜ್, ಮಾಜಿ ರಣಜಿ ಕ್ರಿಕೆಟಿಗ ಅನೂಪ್ ಪೈ, ಕೋಚ್ಗಳಾದ ಶ್ರೀನಿವಾಸ್ಗೆ ಧನ್ಯವಾದ ಸಲ್ಲಿಸುವೆ’’ ಎಂದು ತ್ರಿಶಾ ಹೇಳಿದ್ದಾರೆ.