ನಾನು ಸರಿಯಾದ ಸಮಯಕ್ಕೆ ಭಾರತಕ್ಕೆ ಬಂದಿದ್ದೇನೆ: ಕೊಹ್ಲಿ ಶತಕದ ಆಟ ಮೆಚ್ಚಿದ ಬೆಕ್ ಹ್ಯಾಮ್
ವಾಂಖೆಡೆಯಲ್ಲಿ ಕೊಹ್ಲಿ 50ನೇ ಶತಕಕ್ಕೆ ಸಾಕ್ಷಿಯಾದ ತಾರಾ ಫುಟ್ಬಾಲ್ ಆಟಗಾರ

ಡೇವಿಡ್ ಬೆಕ್ ಹ್ಯಾಮ್,ವಿರಾಟ್ ಕೊಹ್ಲಿ |Photo: hindustantimes.com
ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ದಾಖಲೆಯ ಶತಕಕ್ಕೆ ಸಾಕ್ಷಿಯಾದ ನಂತರ ತಾರಾ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ ಹ್ಯಾಮ್ ”ನಾನು ಸರಿಯಾದ ಸಮಯಕ್ಕೆ ಭಾರತಕ್ಕೆ ಬಂದಿದ್ದೇನೆ“ ಎಂದು ಕೊಹ್ಲಿ ಶತಕದ ಆಟಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ನ್ಯೂಝಿಲ್ಯಾಂಡ್ ವಿರುದ್ಧ ತಮ್ಮ ದಾಖಲೆಯ ಶತಕವನ್ನು 42ನೇ ಓವರ್ನಲ್ಲಿ ಪೂರ್ಣಗೊಳಿಸಿದ ವಿರಾಟ್ ಕೊಹ್ಲಿ , ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ಸಾರ್ವಕಾಲಿಕ 49 ಶತಕವನ್ನು ಮುರಿದು 50ನೇ ಶತಕಗಳೊಂದಿಗೆ ವಿಶೇಷ ಸಾಧನೆ ಮಾಡಿದರು
ಫುಟ್ಬಾಲ್ ಸ್ಟಾರ್ ಬೆಕ್ ಹ್ಯಾಮ್ ಅವರು, ತೆಂಡುಲ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಕುಳಿತು ಪಂದ್ಯ ವೀಕ್ಷಿಸಿದ್ದಾರೆ. ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಉಪಸ್ಥಿತರಿದ್ದರು.
ಭಾರತೀಯ ಇನ್ನಿಂಗ್ಸ್ನ ನಂತರ ಮಾತನಾಡಿದ ಬೆಕ್ ಹ್ಯಾಮ್, “ಈ ಕ್ರೀಡಾಂಗಣದಲ್ಲಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿರುವುದು ನಿಜವಾದ ಸಂತೋಷ. ನಾನು ಇಂದು ಸಚಿನ್ ಅವರೊಂದಿಗೆ ಸ್ವಲ್ಪ ಸಮಯವನ್ನು ಕಳೆದಿದ್ದೇನೆ. ಅವರು ಈ ಕ್ರೀಡಾಂಗಣದಲ್ಲಿ ಏನು ಸಾಧಿಸಿದ್ದಾರೆಂದು ನನಗೆ ತಿಳಿದಿದೆ. ಸಚಿನ್ ಸಾಧನೆ ಮುರಿದ ವಿರಾಟ್ ಕೊಹ್ಲಿಯ ಶತಕದ ವೈಭವ ನಂಬಲಸಾಧ್ಯವಾಗಿದೆ. ನಾನು ಮೊದಲ ಬಾರಿಗೆ ಸರಿಯಾದ ಸಮಯಕ್ಕೆ ಭಾರತಕ್ಕೆ ಬಂದಿದ್ದೇನೆ. ಇದು ತುಂಬಾ ವಿಶೇಷ ಕ್ಷಣ” ಎಂದು ವಿರಾಟ್ ಶತಕಕ್ಕೆ ಬೆಕ್ ಹ್ಯಾಮ್ ಪ್ರತಿಕ್ರಿಯಿಸಿದ್ದಾರೆ.







