"ನನ್ನನ್ನು ನೇಣಿಗೆ ಹಾಕಿ": ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ತಂದೆಯ ಮನವಿ
ತನ್ನ ಪುತ್ರಿಯನ್ನು ಹತ್ಯೆಗೈದಿದ್ದೇನೆ ಎಂದು ತಮ್ಮ ಸಹೋದರನ ಬಳಿ ತಪ್ಪೊಪ್ಪಿಕೊಂಡ ದೀಪಕ್ ಯಾದವ್

Credit: PTI photo/X@theprayagtiwari
ಗುರುಗ್ರಾಮ: ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಹತ್ಯೆಯ ಕುರಿತು ಹೊಸ ವಿಚಾರಗಳು ಬೆಳಕಿಗೆ ಬಂದಿದ್ದು, “ನಾನು ನನ್ನ ಪುತ್ರಿಯನ್ನು ಹತ್ಯೆಗೈದಿದ್ದೇನೆ. ಹೀಗಾಗಿ, ನನ್ನನ್ನು ನೇಣಿಗೆ ಹಾಕಿ” ಎಂದು ತಮ್ಮ ಬಳಿ ನನ್ನ ಸಹೋದರ ದೀಪಕ್ ಯಾದವ್ ಹೇಳಿದ್ದರು ಎಂದು ರಾಧಿಕಾ ಯಾದವ್ ದೊಡ್ಡಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ದೀಪಕ್ ಯಾದವ್ ರ ಹಿರಿಯ ಸಹೋದರ ವಿಜಯ್ ಯಾದವ್, ರಾಧಿಕಾ ಯಾದವ್ ಟೆನಿಸ್ ಅಕಾಡೆಮಿಯನ್ನು ಹೊಂದಿದ್ದರು ಎಂಬ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದರು.
“ದೀಪಕ್ ನದ್ದು ಅನುಕೂಲಸ್ಥ ಕುಟುಂಬವಾಗಿದೆ. ದೀಪಕ್ ಗೆ ತನ್ನ ತಪ್ಪಿನ ಅರಿವಾಗಿದ್ದು, ಪಶ್ಚಾತ್ತಾಪಕ್ಕಿಂತ ಅತಿ ದೊಡ್ಡ ಶಿಕ್ಷೆ ಮತ್ತೊಂದಿರಲು ಸಾಧ್ಯವಿಲ್ಲ. ಇಡೀ ಕುಟುಂಬ ಆಘಾತದಲ್ಲಿದೆ. ರಾಧಿಕಾ ಜಾಹೀರಾತು ಉದ್ಯಮದಲ್ಲಿ ಕೆಲಸ ಮಾಡಲು ಬಯಸಿದ್ದಳು ಹಾಗೂ ರೂಪದರ್ಶಿಯೂ ಆಗಿದ್ದಳು. ಆಕೆ ಗೀತೆಯೊಂದನ್ನು ಸಂಯೋಜಿಸಿದ್ದಳು ಹಾಗೂ ಈ ಬಗ್ಗೆ ಕುಟುಂಬದ ಎಲ್ಲ ಸದಸ್ಯರೂ ಖುಷಿಗೊಂಡಿದ್ದರು” ಎಂದು ಅವರು ಮಾಹಿತಿ ನೀಡಿದ್ದಾರೆ.
ನನ್ನ ತಮ್ಮ ತನ್ನ ಪುತ್ರಿಯನ್ನು ತುಂಬಾ ಪ್ರೀತಿಸುತ್ತಿದ್ದ ಹಾಗೂ ಆಕೆಗಾಗಿ ಕೋಟ್ಯಂತರ ರೂಪಾಯಿಯನ್ನು ವ್ಯಯಿಸಿದ್ದು ಮಾತ್ರವಲ್ಲ, ಬದಲಿಗೆ ತನ್ನ ಇಡೀ ಜೀವನವನ್ನೇ ಆಕೆಗಾಗಿ ಮುಡುಪಾಗಿಟ್ಟಿದ್ದ ಎಂದೂ ವಿಜಯ್ ಯಾದವ್ ತಿಳಿಸಿದ್ದಾರೆ.
ಈ ಮಧ್ಯೆ, ರಾಧಿಕಾ ಯಾದವ್ ಹಾಗೂ ಆಕೆಯ ತರಬೇತುದಾರ ಅಜಯ್ ಯಾದವ್ ನಡುವಿನ ವಾಟ್ಸ್ ಆ್ಯಪ್ ಸಂಭಾಷಣೆ ವೈರಲ್ ಆಗಿದ್ದು, ಈ ಸಂಭಾಷಣೆಯಲ್ಲಿ ರಾಧಿಕಾ ಯಾದವ್ ತಾನು ಮನೆ ತೊರೆಯುವ ಕುರಿತು ಹಾಗೂ ಯಾವುದೇ ಬೆಲೆ ತೆತ್ತಾದರೂ ವಿದೇಶಕ್ಕೆ ತೆರಳುವ ಕುರಿತು ತನ್ನ ತರಬೇತುದಾರ ಅಜಯ್ ಯಾದವ್ ರೊಂದಿಗೆ ಚರ್ಚಿಸಿರುವುದು ಬೆಳಕಿಗೆ ಬಂದಿದೆ. ಈ ವಿಷಯವೇ ರಾಧಿಕಾ ಯಾದವ್ ಹಾಗೂ ಆಕೆಯ ತಂದೆ ದೀಪಕ್ ಯಾದವ್ ನಡುವಿನ ವ್ಯಾಜ್ಯಕ್ಕೆ ಕಾರಣವಾಗಿರಬಹುದು ಎಂಬ ವದಂತಿಗಳು ಹರಡಿವೆ. ಆದರೆ, ಈ ಆಯಾಮದ ಕುರಿತು ಯಾವುದೇ ತನಿಖೆ ನಡೆಯುತ್ತಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.







