ಐಸಿಸಿ ನೀತಿ ಸಂಹಿತೆ ಉಲ್ಲಂಘನೆ : ಪಾಕಿಸ್ತಾನದ ಆಟಗಾರ್ತಿ ಸಿದ್ರಾ ಅಮಿನ್ಗೆ 1 ಡಿಮೆರಿಟ್ ಪಾಯಿಂಟ್

ಸಿದ್ರಾ ಅಮಿನ್ | Photo Credit : NDTV
ಕೊಲಂಬೊ, ಅ.6: ಭಾರತ ಕ್ರಿಕೆಟ್ ತಂಡದ ವಿರುದ್ಧ ರವಿವಾರ ನಡೆದ ಮಹಿಳಾ ವಿಶ್ವಕಪ್ ಪಂದ್ಯದ ವೇಳೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನದ ಆಟಗಾರ್ತಿ ಸಿದ್ರಾ ಅಮಿನ್ಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ವಾಗ್ದಂಡನೆ ವಿಧಿಸಿದ್ದಲ್ಲದೆ, ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ.
ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಗೆಲುವಿಗೆ 247 ರನ್ ಗುರಿ ಪಡೆದಿದ್ದ ಪಾಕಿಸ್ತಾನ ತಂಡದ ಪರ ಅಮಿನ್ 81 ರನ್ ಗಳಿಸಿದ್ದರು. ಅವರು ಔಟಾದ ನಂತರ ಪಿಚ್ಗೆ ಬ್ಯಾಟನ್ನು ಬಡಿದು ತನ್ನ ಅಸಮಾಧಾನ ಹೊರಹಾಕಿದ್ದರು. ಅಮೀನ್ ಏಕಾಂಗಿ ಹೋರಾಟದ ಹೊರತಾಗಿಯೂ ಪಾಕ್ ತಂಡವು 159 ರನ್ಗಳಿಗೆ ಆಲೌಟಾಗಿ 88 ರನ್ ಅಂತರದಿಂದ ಸೋಲುಂಡಿತ್ತು.
40ನೇ ಓವರ್ನಲ್ಲಿ ಸ್ನೇಹ ರಾಣಾ ಅವರಿಂದ ಅಮಿನ್ ಔಟ್ ಆದ ನಂತರ ಈ ಘಟನೆ ನಡೆದಿದೆ. ಇದು ನೀತಿ ಸಂಹಿತೆಯ ಉಲ್ಲಂಘನೆಗೆ ಕಾರಣವಾಯಿತು.
‘‘ಸಿದ್ರಾ ಅಮಿನ್ ಅವರು ಆಟಗಾರರು ಹಾಗೂ ಆಟಗಾರರ ಸಹಾಯಕ ಸಿಬ್ಬಂದಿಗೆ ಸಂಬಂಧಿಸಿದ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. 24 ತಿಂಗಳ ಅವಧಿಯಲ್ಲಿ ಮೊದಲ ನೀತಿ ಸಂಹಿತೆ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅಮಿನ್ ಅವರ ಶಿಸ್ತಿನ ದಾಖಲೆಗೆ 1 ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.





