ಭಾರತ ಪ್ರವಾಸಕ್ಕೆ ನಿರಾಕರಿಸಿದ ಬಾಂಗ್ಲಾದೇಶ ವಿರುದ್ಧ ಕಠಿಣ ಕ್ರಮಕ್ಕೆ ಐಸಿಸಿ ಚಿಂತನೆ

Photo Credit ; ICC
ಹೊಸದಿಲ್ಲಿ, ಜ.23: ಮುಂಬರುವ 2026ರ ಆವೃತ್ತಿಯ ಐಸಿಸಿ ಪುರುಷರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲು ಭಾರತಕ್ಕೆ ಪ್ರವಾಸ ಕೈಗೊಳ್ಳಲು ಬಾಂಗ್ಲಾದೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಅದರ ವಿರುದ್ಧ ಐಸಿಸಿ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದೆ ಎಂದು ಸುದ್ದಿಸಂಸ್ಥೆ ಎಎನ್ಐ ಶುಕ್ರವಾರ ವರದಿ ಮಾಡಿದೆ.
ಐಸಿಸಿ ಅಧ್ಯಕ್ಷ ಜಯ್ ಶಾ ಪ್ರಸ್ತುತ ದುಬೈನಲ್ಲಿ ಇದ್ದು, ಈ ವಿಚಾರದ ಕುರಿತು ಅಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.
ಭಾರತದಿಂದ ಶ್ರೀಲಂಕಾಕ್ಕೆ ಪಂದ್ಯಗಳನ್ನು ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ತಂಡದ ಬೇಡಿಕೆಯನ್ನು ಐಸಿಸಿ ತಿರಸ್ಕರಿಸಿದ ಬಳಿಕ ಮುಂದಿನ ತಿಂಗಳು ನಡೆಯಲಿರುವ ಟಿ-20 ವಿಶ್ವಕಪ್ ಗೆ ತನ್ನ ರಾಷ್ಟ್ರೀಯ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಗುರುವಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಸ್ಕಾಟ್ಲ್ಯಾಂಡ್ ತಂಡವು ಪಂದ್ಯಾವಳಿಯಲ್ಲಿ ಬಾಂಗ್ಲಾದೇಶದ ಬದಲಿಗೆ ಆಡುವ ಸಾಧ್ಯತೆಯಿದೆ.
ಭಾರತಕ್ಕೆ ಪ್ರಯಾಣಿಸಲು ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ ಬದಲಿ ತಂಡವನ್ನು ಆಡಿಸಲಾಗುವುದು ಎಂದು ಐಸಿಸಿ ಬುಧವಾರ ಬಾಂಗ್ಲಾದೇಶಕ್ಕೆ ಅಂತಿಮ ಎಚ್ಚರಿಕೆ ನೀಡಿತ್ತು.
ಭಾರತದಲ್ಲಿ ಬಾಂಗ್ಲಾದೇಶ ಆಟಗಾರರು, ಅಧಿಕಾರಿಗಳು ಅಥವಾ ಅಭಿಮಾನಿಗಳ ಸುರಕ್ಷತೆಗೆ ಯಾವುದೇ ಬೆದರಿಕೆ ಇಲ್ಲ ಎಂದು ತಿಳಿಸಿರುವ ಐಸಿಸಿ, ಇದಕ್ಕೆ ಪ್ರತಿಕ್ರಿಯಿಸಲು ಗುರುವಾರದ ತನಕ ಬಾಂಗ್ಲಾದೇಶಕ್ಕೆ ಸಮಯ ನೀಡಿತ್ತು.
“ನಮ್ಮ ಕ್ರಿಕೆಟಿಗರು ವಿಶ್ವಕಪ್ಗೆ ಅರ್ಹತೆ ಪಡೆಯಲು ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಭಾರತದಲ್ಲಿ ಆಡುವ ಬಗ್ಗೆ ಭದ್ರತಾ ಅಪಾಯಗಳ ಕುರಿತು ನಮ್ಮ ಆತಂಕ ನಿವಾರಣೆಯಾಗಿಲ್ಲ. ನಮ್ಮ ಇಡೀ ತಂಡ, ಪತ್ರಕರ್ತರು ಹಾಗೂ ಪ್ರೇಕ್ಷಕರ ಸುರಕ್ಷತೆ ಕುರಿತು ನಮಗೆ ಸಂಪೂರ್ಣ ಭರವಸೆ ಇಲ್ಲ. ನಾವು ವಿಶ್ವಾಸವನ್ನು ಕಳೆದುಕೊಂಡಿಲ್ಲ; ನಮ್ಮ ತಂಡ ಸಿದ್ಧವಾಗಿದೆ,” ಎಂದು ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಝ್ರುಲ್ ಹೇಳಿದ್ದಾರೆ.
2026ರ ಟಿ-20 ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸುವಂತೆ ಕೋರಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಐಸಿಸಿಯ ಸ್ವತಂತ್ರ ವಿವಾದ ಪರಿಹಾರ ಸಮಿತಿ (ಡಿಆರ್ಸಿ)ಯನ್ನು ಸಂಪರ್ಕಿಸಿದೆ ಎಂದು ‘ದಿ ಡೈಲಿ ಸ್ಟಾರ್’ ವರದಿ ಮಾಡಿದೆ.
ಡಿಆರ್ಸಿಯನ್ನು ಸಂಪರ್ಕಿಸುವ ಮೂಲಕ ಭಾರತದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ಐಸಿಸಿ ನಿರ್ಧಾರಕ್ಕೆ ಸವಾಲೊಡ್ಡಲು ಬಿಸಿಬಿ ಯತ್ನಿಸುತ್ತಿದೆ.
ತನ್ನ ಅಧಿಕಾರ ವ್ಯಾಪ್ತಿಗೆ ಇದು ಬಾರದ ಕಾರಣ ಬಿಸಿಬಿಯ ಕೋರಿಕೆಯನ್ನು ಡಿಆರ್ಸಿ ಆಲಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಡಿಆರ್ಸಿ ನಮ್ಮ ವಿರುದ್ಧ ತೀರ್ಪು ನೀಡಿದರೆ, ಸ್ವಿಟ್ಸರ್ಲ್ಯಾಂಡ್ನಲ್ಲಿರುವ ಕ್ರೀಡಾ ಪಂಚಾಯಿತಿ ನ್ಯಾಯಾಲಯ (ಸಿಎಎಸ್) ಅನ್ನು ಸಂಪರ್ಕಿಸಲಾಗುವುದು ಎಂದು ಬಿಸಿಬಿ ಮೂಲಗಳು ಪಿಟಿಐಗೆ ತಿಳಿಸಿವೆ.
ಬಿಸಿಬಿಯು ತನ್ನ ನಾಲ್ಕೂ ಗ್ರೂಪ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲು ಅನುಮತಿ ನೀಡುವಂತೆ ವಿನಂತಿಸಿದೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಐಸಿಸಿ ಆಯೋಜಿತ ಪಂದ್ಯಗಳು ಹೈಬ್ರಿಡ್ ವ್ಯವಸ್ಥೆಯಲ್ಲಿ 2027ರ ತನಕ ತಟಸ್ಥ ತಾಣದಲ್ಲಿ ನಡೆಯಲಿವೆ.







