ವಿಶ್ವಕಪ್-2023 ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ: ಅ.14ರಂದು ಭಾರತ-ಪಾಕಿಸ್ತಾನ ಹಣಾಹಣಿ
ಇತರ 8 ಪಂದ್ಯಗಳ ವೇಳಾಪಟ್ಟಿಯಲ್ಲೂ ಬದಲಾವಣೆ

ICC World Cup | Photo: PTI
ಹೊಸದಿಲ್ಲಿ: ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನ 9 ಪಂದ್ಯಗಳ ಪರಿಷ್ಕೃತ ದಿನಾಂಕಗಳನ್ನು ಐಸಿಸಿ ಬುಧವಾರ ಪ್ರಕಟಿಸಿದೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಮೂಲ ವೇಳಾಪಟ್ಟಿ ಪ್ರಕಾರ ಅಕ್ಟೋಬರ್ 15ರಂದು ನಡೆಯಬೇಕಾಗಿತ್ತು. ಇದೀಗ ಆ ಪಂದ್ಯವು ಒಂದು ದಿನ ಮೊದಲು ಅಕ್ಟೋಬರ್ 14ರಂದು ಅಹಮದಾಬಾದ್ ನಲ್ಲೇ ನಡೆಯಲಿದೆ ಎಂದು ಐಸಿಸಿ ತಿಳಿಸಿದೆ.
ನವರಾತ್ರಿ ಉತ್ಸವದ ಮೊದಲ ದಿನವಾದ ಅ.15ರಂದು ಭದ್ರತೆ ಮೇಲೆ ನಿಗಾ ಇಡುವುದು ಕಷ್ಟವಾಗುತ್ತದೆ ಎಂದು ಅಹಮದಾಬಾದ್ ಪೊಲೀಸರು ಬಿಸಿಸಿಐಗೆ ತಿಳಿಸಿದ ಕಾರಣ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ಅದೇ ರೀತಿ ಅಕ್ಟೋಬರ್ 14ರಂದು ದಿಲ್ಲಿಯಲ್ಲಿ ನಿಗದಿಯಾಗಿದ್ದ ಇಂಗ್ಲೆಂಡ್ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯವು ಇದೀಗ ಅಕ್ಟೋಬರ್ 15ರಂದು ನಡೆಯಲಿದೆ.
ಶ್ರೀಲಂಕಾ ವಿರುದ್ಧ ಹೈದರಾಬಾದ್ನಲ್ಲಿ ಪಾಕಿಸ್ತಾನ ಆಡಬೇಕಾಗಿದ್ದ ಪಂದ್ಯವು ಅಕ್ಟೋಬರ್ 12 ರ ಬದಲಿಗೆ ಅ.10ರಂದು, ಲಕ್ನೊದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ಮಧ್ಯದ ಪ್ರಮುಖ ಪಂದ್ಯವು ಅಕ್ಟೋಬರ್ 13ರ ಬದಲಿಗೆ ಅ.12ಕ್ಕೆ ನಿಗದಿಪಡಿಸಲಾಗಿದೆ.
ನ್ಯೂಝಿಲ್ಯಾಂಡ್ ಹಾಗೂ ಬಾಂಗ್ಲಾದೇಶ ನಡುವೆ ಚೆನ್ನೈನಲ್ಲಿ ಅ.14ರಂದು ನಡೆಯಬೇಕಾಗಿದ್ದ ಪಂದ್ಯವು ಅ.13ರಂದೇ ನಡೆಯಲಿದೆ. ಧರ್ಮಶಾಲಾದಲ್ಲಿ ಬಾಂಗ್ಲಾದೇಶ ವಿರುದ್ಧದ ಇಂಗ್ಲೆಂಡ್ ಪಂದ್ಯವು ಅಕ್ಟೋಬರ್ 10ರಂದು ಹಗಲು-ರಾತ್ರಿ ಬದಲಿಗೆ ಬೆಳಗ್ಗೆ 10:30ಕ್ಕೆ ಆರಂಭವಾಗಲಿದೆ.
ಲೀಗ್ ಹಂತದ ಕೊನೆಯಲ್ಲಿ ರವಿವಾರ ನಡೆಯುವ 2 ಪಂದ್ಯವು ಸೇರಿದಂತೆ ಮೂರು ಬದಲಾವಣೆ ಮಾಡಲಾಗಿದೆ. ನವೆಂಬರ್ 12 ರಂದು ಕೋಲ್ಕತಾದಲ್ಲಿ ಇಂಗ್ಲೆಂಡ್-ಪಾಕಿಸ್ತಾನ, ಪುಣೆಯಲ್ಲಿ ಆಸ್ಟ್ರೇಲಿಯ-ಬಾಂಗ್ಲಾದೇಶ ನಡುವಿನ ಪಂದ್ಯವನ್ನು ನವೆಂಬರ್ 11ಕ್ಕೆ ಬದಲಾಯಿಸಲಾಗಿದೆ. ಭಾರತವು ನೆದರ್ಲ್ಯಾಂಡ್ಸ್ ವಿರುದ್ಧ ಬೆಂಗಳೂರಿನಲ್ಲಿ ಆಡಲಿರುವ ಕೊನೆಯ ಲೀಗ್ ಪಂದ್ಯವು ನವೆಂಬರ್ 11ರ ಬದಲಿಗೆ ನವೆಂಬರ್ 12ಕ್ಕೆ ನಡೆಯಲಿದೆ. ಇದು ಅಹರ್ನಿಶಿ ಪಂದ್ಯವಾಗಿದೆ.
ಪರಿಷ್ಕೃತ ವೇಳಾಪಟ್ಟಿ
ಅ.10 ಇಂಗ್ಲೆಂಡ್-ಬಾಂಗ್ಲಾದೇಶ ಧರ್ಮಶಾಲಾ ಬೆಳಗ್ಗೆ 10:30
ಅ.10 ಪಾಕಿಸ್ತಾನ-ಶ್ರೀಲಂಕಾ ಹೈದರಾಬಾದ್ ಮಧ್ಯಾಹ್ನ 2:00
ಅ.12 ಆಸ್ಟ್ರೇಲಿಯ-ದ.ಆಫ್ರಿಕಾ ಲಕ್ನೊ ಮಧ್ಯಾಹ್ನ 2:00
ಅ.13 ನ್ಯೂಝಿಲ್ಯಾಂಡ್-ಬಾಂಗ್ಲಾ ಚೆನ್ನೈ ಮಧ್ಯಾಹ್ನ 2:00
ಅ.14 ಭಾರತ-ಪಾಕಿಸ್ತಾನ ಅಹಮದಾಬಾದ್ ಮಧ್ಯಾಹ್ನ 2:00
ಅ.15 ಇಂಗ್ಲೆಂಡ್-ಅಫ್ಘಾನಿಸ್ತಾನ ದಿಲ್ಲಿ ಮಧ್ಯಾಹ್ನ 2:00
ನ.11 ಆಸ್ಟ್ರೇಲಿಯ-ಬಾಂಗ್ಲಾದೇಶ ಪುಣೆ ಬೆಳಗ್ಗೆ 10:30
ನ.11 ಇಂಗ್ಲೆಂಡ್-ಪಾಕಿಸ್ತಾನ ಕೋಲ್ಕತಾ ಮಧ್ಯಾಹ್ನ 2:00
ನ.12 ಭಾರತ-ನೆದರ್ಲ್ಯಾಂಡ್ಸ್ ಬೆಂಗಳೂರು ಮಧ್ಯಾಹ್ನ 2:00