ವೀಕ್ಷಣೆಯಲ್ಲಿ ದಾಖಲೆ ಮುರಿದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ

PC : ICC
ದುಬೈ: ಇತ್ತೀಚೆಗೆ ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯು ವೀಕ್ಷಣೆಯಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳು ಈ ಪಂದ್ಯಾವಳಿಯ ಪಂದ್ಯಗಳನ್ನು ಒಟ್ಟು 36,800 ಕೋಟಿ ನಿಮಿಷಗಳ ಕಾಲ ವೀಕ್ಷಿಸಿದ್ದಾರೆ. ಇದು 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗಿಂತ 19 ಶೇಕಡದಷ್ಟು ಹೆಚ್ಚಾಗಿದೆ.
ದುಬೈನಲ್ಲಿ ನಡೆದ ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಸೋಲಿಸಿ ಭಾರತ ಕ್ರಿಕೆಟ್ ತಂಡ ಪ್ರಶಸ್ತಿ ಎತ್ತಿದೆ.
ಈ ಪಂದ್ಯಾವಳಿಯು, ಇತಿಹಾಸದಲ್ಲೇ ಜನರು ಅತಿ ಹೆಚ್ಚು ವೀಕ್ಷಿಸಿದ ಚಾಂಪಿಯನ್ಸ್ ಟ್ರೋಫಿ ಆಯಿತು. ಫೈನಲ್ ಪಂದ್ಯದ ನೇರಪ್ರಸಾರವನ್ನು ಜಾಗತಿಕ ನೆಲೆಯಲ್ಲಿ ಜನರು 6530 ಕೋಟಿ ನಿಮಿಷಗಳ ಕಾಲ ವೀಕ್ಷಿಸಿದರು. ಇದು 2017ರ ಪಂದ್ಯಾವಳಿಯ ಫೈನಲ್ಗಿಂತ 52.1 ಶೇಕಡ ಅಧಿಕವಾಗಿದೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಸಾರ್ವಕಾಲಿಕ ಮೂರನೇ ಅತಿ ಹೆಚ್ಚು ವೀಕ್ಷಣೆಗೊಳಗಾದ ಐಸಿಸಿ ಪಂದ್ಯವಾಗಿದೆ.
ಆ ಪಂದ್ಯಾವಳಿಯ ಪ್ರತಿಯೊಂದು ಓವರನ್ನು ಜಾಗತಿಕ ಪ್ರೇಕ್ಷಕರು ಸರಾಸರಿ 30.8 ಕೋಟಿ ನಿಮಿಷಗಳ ಕಾಲ ವೀಕ್ಷಿಸಿದರು. ಇದು ಯಾವುದೇ ಐಸಿಸಿ ಪಂದ್ಯಾವಳಿಯ ಗರಿಷ್ಠವಾಗಿದ್ದು ನೂತನ ದಾಖಲೆಯಾಗಿದೆ.
ಫೈನಲ್ ಪಂದ್ಯವು ಭಾರತದಲ್ಲಿ ಮೂರನೇ ಅತಿ ಹೆಚ್ಚು ವೀಕ್ಷಣೆಯನ್ನು ಹೊಂದಿದ ಐಸಿಸಿ ಪಂದ್ಯವಾಯಿತು. ಪ್ರಥಮ ಮತ್ತು ಎರಡನೇ ಸ್ಥಾನಗಳಲ್ಲಿ 2023ರ ಐಸಿಸಿ ಏಕದಿನ ವಿಶ್ವಕಪ್ನ ಭಾರತ-ನ್ಯೂಝಿಲ್ಯಾಂಡ್ ಸೆಮಿಫೈನಲ್ ಮತ್ತು ಭಾರತ-ಆಸ್ಟ್ರೇಲಿಯ ಫೈನಲ್ ಪಂದ್ಯಗಳಿವೆ.





