ಐರ್ಲ್ಯಾಂಡ್ ವಿರುದ್ಧ ಭರ್ಜರಿ ಜಯ, ಶ್ರೀಲಂಕಾ ಸೂಪರ್ ಸಿಕ್ಸ್ಗೆ ಲಗ್ಗೆ
ಐಸಿಸಿ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್: ಕರುಣರತ್ನೆ ಶತಕ, ಹಸರಂಗ ಹ್ಯಾಟ್ರಿಕ್

ಬುಲಾವಯೊ: ಆರಂಭಿಕ ಬ್ಯಾಟರ್ ಡಿಮುತ್ ಕರುಣರತ್ನೆ ಶತಕ(103 ರನ್, 103 ಎಸೆತ)ಹಾಗೂ ಎಸ್.ಸಮರವಿಕ್ರಮ(82 ರನ್,86 ಎಸೆತ)ಅರ್ಧಶತಕ, ಸತತ 3ನೇ ಬಾರಿ ಹ್ಯಾಟ್ರಿಕ್ ಪಡೆದ ಸ್ಪಿನ್ನರ್ ವನಿಂದು ಹಸರಂಗ(5-79) ಸಾಹಸದ ನೆರವಿನಿಂದ ಶ್ರೀಲಂಕಾ ತಂಡ ಐರ್ಲ್ಯಾಂಡ್ ವಿರುದ್ಧ ಐಸಿಸಿ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ 133 ರನ್ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಟೂರ್ನಮೆಂಟ್ನ ಸೂಪರ್-6 ಹಂತಕ್ಕೆ ಲಗ್ಗೆ ಇಟ್ಟಿದೆ.
ರವಿವಾರ ಟಾಸ್ ಜಯಿಸಿದ ಐರ್ಲ್ಯಾಂಡ್ ತಂಡ ಶ್ರೀಲಂಕಾವನ್ನು ಬ್ಯಾಟಿಂಗ್ಗೆ ಇಳಿಸಿತು. ಲಂಕಾ ತಂಡ 49.5 ಓವರ್ಗಳಲ್ಲಿ 325 ರನ್ ಗಳಿಸಿ ಆಲೌಟಾಯಿತು.ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಐರ್ಲ್ಯಾಂಡ್ 31 ಓವರ್ಗಳಲ್ಲಿ 192 ರನ್ಗೆ ಆಲೌಟಾಯಿತು. ಐದು
ವಿಕೆಟ್ ಗೊಂಚಲು ಪಡೆದ ಹಸರಂಗ ಐರ್ಲ್ಯಾಂಡ್ ತಂಡವನ್ನು ಇನ್ನಿಲ್ಲದಂತೆ ಕಾಡಿದರು.
ಹೀನಾಯ ಸೋಲನುಭವಿಸಿರುವ ಐರ್ಲ್ಯಾಂಡ್ ಅರ್ಹತಾ ಸ್ಪರ್ಧೆಯಿಂದ ಹೊರ ನಡೆಯಿತು. ಶ್ರೀಲಂಕಾದ ಗೆಲುವಿನೊಂದಿಗೆ ಸ್ಕಾಟ್ಲ್ಯಾಂಡ್ ಹಾಗೂ ಒಮಾನ್ ತಂಡಗಳು ಬಿ ಗುಂಪಿನಿಂದ ಮುಂದಿನ ಸುತ್ತಿಗೆ ಅರ್ಹತೆ ಪಡೆದಿವೆ. ಕರುಣರತ್ನೆ ಶತಕ ಹಾಗೂ ಸಮರವಿಕ್ರಮ ಅರ್ಧಶತಕದ ನೆರವಿನಿಂದ ಲಂಕೆಯು 325 ರನ್ ಗಳಿಸಲು ಶಕ್ತವಾಯಿತು. ಕರುಣರತ್ನೆ ಹಾಗೂ ಸಮರವಿಕ್ರಮ 3ನೇ ವಿಕೆಟ್ಗೆ
168 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಚರಿತ ಅಸಲಂಕ(38 ರನ್) ಹಾಗೂ ಧನಂಜಯ ಡಿಸಿಲ್ವ(ಔಟಾಗದೆ 42)ಕೂಡ ಅಂತಿಮ ಓವರ್ಗಳಲ್ಲಿ ಐರ್ಲ್ಯಾಂಡ್ ಬೌಲರ್ಗಳ ಬೆಂಡೆತ್ತಿದರು. ಅರ್ಹತಾ ಸುತ್ತಿನಲ್ಲಿ ಸ್ಪರ್ಧೆಯಲ್ಲಿರಲು ಐರ್ಲ್ಯಾಂಡ್ಗೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಆದರೆ ಅದು ತನ್ನ ಹಿರಿಯ ಆರಂಭಿಕ ಬ್ಯಾಟರ್ ಪೌಲ್ ಸ್ಟಿರ್ಲಿಂಗ್(6 ರನ್) ವಿಕೆಟನ್ನು ಬೇಗನೆ ಕಳೆದುಕೊಂಡಿತು. ನಾಯಕ ಆ್ಯಂಡಿ ಬಾಲ್ಬಿರ್ನಿ(12 ರನ್) ಔಟಾದಾಗ ಐರ್ಲ್ಯಾಂಡ್ 57 ರನ್ಗೆ 3ನೇ ವಿಕೆಟ್ ಕಳೆದುಕೊಂಡಿತು. ವನಿಂದು ಹಸರಂಗ ಅವರು ಹ್ಯಾರಿ ಟೆಕ್ಟರ್(33ರನ್)ವಿಕೆಟನ್ನು ಉರುಳಿಸಿದರು.
ಸ್ಕಾಟ್ಲ್ಯಾಂಡ್ ವಿರುದ್ಧ ಶತಕ ಸಿಡಿಸಿದ್ದ ಕರ್ಟಿಸ್ ಕ್ಯಾಂಫರ್ ತಂಡದ ಪರ ಸರ್ವಾಧಿಕ ಸ್ಕೋರ್ (39 ರನ್) ಗಳಿಸಿ ಔಟಾದರು.
ಶ್ರೀಲಂಕಾದ ಲೆಗ್ ಸ್ಪಿನ್ನರ್ ಹಸರಂಗ(5/79)ಝಿಂಬಾಬ್ವೆಯಲ್ಲಿ ಈತನಕ ನಡೆದ ಕ್ವಾಲಿಫೈಯರ್ ಸುತ್ತಿನ 3 ಪಂದ್ಯಗಳಲ್ಲಿ ಒಟ್ಟು 16 ವಿಕೆಟ್ಗಳನ್ನು ಕಬಳಿಸಿ ಎದುರಾಳಿಗೆ ದುಸ್ವಪ್ನರಾಗಿದ್ದಾರೆ.