2035ರ ತನಕದ ಜಾಗತಿಕ ಕ್ರಿಕೆಟ್ ವೇಳಾಪಟ್ಟಿ ಅಂತಿಮಗೊಳಿಸಿದ ಐಸಿಸಿ

Photo Credit : icc-cricket.com
ಹೊಸದಿಲ್ಲಿ: ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)2035ರ ತನಕದ ತನ್ನ ಪ್ರಮುಖ ಪುರುಷರ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಿದೆ. ಇದರೊಂದಿಗೆ 2027ರ ಪುರುಷರ ಏಕದಿನ ವಿಶ್ವಕಪ್ ಹಾಗೂ 2028ರ ಪುರುಷರ ಹಾಗೂ ಮಹಿಳೆಯರ ಟಿ20 ವಿಶ್ವಕಪ್ಗಳು ಸೇರಿದಂತೆ ಮೂರು ಜಾಗತಿಕ ಟೂರ್ನಿಗಳಿಗೆ ಅರ್ಹತಾ ಪ್ರಕ್ರಿಯೆಯ ಸ್ವರೂಪಗಳನ್ನು ಕೂಡ ಅಂತಿಮಗೊಳಿಸಿದೆ.
ಇಂಡೋನೇಶ್ಯದ ಬಾಲಿಯಲ್ಲಿ ರವಿವಾರ ನಡೆದ ಐಸಿಸಿ ಮಂಡಳಿ ಸಭೆಗಳಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪೂರ್ಣ ಸದಸ್ಯ ರಾಷ್ಟ್ರಗಳು ಹಾಗೂ ಸಹ ಸದಸ್ಯ ರಾಷ್ಟ್ರಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಅಗತ್ಯವನ್ನು ಆಡಳಿತ ಮಂಡಳಿಯು ಒತ್ತಿ ಹೇಳಿದೆ.
2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಮರು ಪ್ರವೇಶ ಪಡೆಯುತ್ತಿದ್ದು, ಇದಕ್ಕಾಗಿ ನಡೆಯುವ ಅಂತಿಮ ಅರ್ಹತಾ ಟೂರ್ನಿಗಳ ದಿನಾಂಕಗಳು ಹಾಗೂ ಆತಿಥೇಯ ರಾಷ್ಟ್ರಗಳನ್ನು ಸಹ ಐಸಿಸಿ ಖಚಿತಪಡಿಸಿದೆ.
ಪುರುಷರ ವಿಭಾಗದ ಒಲಿಂಪಿಕ್ಸ್ ಅರ್ಹತಾ ಟೂರ್ನಿಯು 2028ರ ಫೆಬ್ರವರಿ 5ರಿಂದ 13ರ ವರೆಗೆ ಅಮೆರಿಕದಲ್ಲಿ ನಡೆಯಲಿದೆ. ಮಹಿಳೆಯರ ವಿಭಾಗದ ಟೂರ್ನಿಯು ಜನವರಿ 26ರಿಂದ ಮಾರ್ಚ್ 5ರ ತನಕ ಬಾಂಗ್ಲಾದೇಶದಲ್ಲಿ ನಡೆಯಲಿದೆ.
ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್ನಲ್ಲಿ ನಡೆಯಲಿರುವ 2028ರ ಪುರುಷರ ಟಿ-20 ವಿಶ್ವಕಪ್ನಿಂದ 2035ರ ಪುರುಷರ ಕ್ರಿಕೆಟ್ ವಿಶ್ವಕಪ್ ತನಕ ಪ್ರಮುಖ ಪುರುಷರ ಟೂರ್ನಿಗಳ ವೇಳಾಪಟ್ಟಿಯನ್ನು ಐಸಿಸಿ ಮಂಡಳಿ ಅನುಮೋದಿಸಿದೆ. ಈ ವೇಳಾಪಟ್ಟಿಯಲ್ಲಿ ಪುರುಷರ ಟಿ20 ವಿಶ್ವಕಪ್ನ ನಾಲ್ಕು ಆವೃತ್ತಿಗಳು, ಎರಡು ಏಕದಿನ ವಿಶ್ವಕಪ್ಗಳು, ಮೂರು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಳು ಹಾಗೂ ಎರಡು ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳು ಸೇರಿವೆ.
2029ರ ಪುರುಷರ ಚಾಂಪಿಯನ್ಸ್ ಟ್ರೋಫಿಯು ಅಕ್ಟೋಬರ್ 9ರಿಂದ 28ರ ತನಕ ಭಾರತದಲ್ಲಿ ನಡೆಯಲಿದೆ. ಹಾಗೆಯೇ 2031ರ ಪುರುಷರ ಕ್ರಿಕೆಟ್ ವಿಶ್ವಕಪ್ ಅನ್ನು ಭಾರತ ಹಾಗೂ ಬಾಂಗ್ಲಾದೇಶಗಳು ಜಂಟಿಯಾಗಿ ಆಯೋಜಿಸಲಿದ್ದು, ಇದು ಅಕ್ಟೋಬರ್ 9ರಿಂದ ನವೆಂಬರ್ 23ರ ತನಕ ನಡೆಯಲಿದೆ. 2029 ಹಾಗೂ 2031ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಗಳನ್ನು ಇಂಗ್ಲೆಂಡ್ ಆಯೋಜಿಸಲಿದೆ. ಇವು ಕ್ರಮವಾಗಿ ಜೂ.8-12 ಹಾಗೂ ಜೂ.12-16ರಂದು ನಡೆಯಲಿವೆ.






