ಐಸಿಸಿ ಏಕದಿನ ರ್ಯಾಂಕಿಂಗ್: ಝಿಂಬಾಬ್ವೆಯ ಸಿಕಂದರ್ ರಝಾ ನಂ.1 ಆಲ್ರೌಂಡರ್

ಸಿಕಂದರ್ ರಝಾ | PC : ANI
ದುಬೈ, ಸೆ.3: ಝಿಂಬಾಬ್ವೆಯ ಹಿರಿಯ ಸ್ಟಾರ್ ಆಟಗಾರ ಸಿಕಂದರ್ ರಝಾ ತನ್ನ 39ನೇ ವಯಸ್ಸಿನಲ್ಲಿ ಪುರುಷರ ಐಸಿಸಿ ಏಕದಿನ ಆಲ್ ರೌಂಡರ್ ಗಳ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನಕ್ಕೇರುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಹರಾರೆಯಲ್ಲಿ ಶ್ರೀಲಂಕಾ ತಂಡದ ವಿರುದ್ಧ ಏಕದಿನ ಸರಣಿಯಲ್ಲಿ ಝಿಂಬಾಬ್ವೆ ತಂಡ ಎಡವಿದ ಹೊರತಾಗಿಯೂ ರಝಾ ಅವರು ಬ್ಯಾಟ್ ಹಾಗೂ ಬಾಲ್ ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇದರೊಂದಿಗೆ ಅಫ್ಘಾನಿಸ್ತಾನದ ಮುಹಮ್ಮದ್ ನಬಿ ಹಾಗೂ ಅಮಾನುತುಲ್ಲಾ ಉಮರ್ ಝೈ ಅವರನ್ನು ಹಿಂದಿಕ್ಕಿ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದರು.
ರಝಾ ಅವರು ಮೊದಲ ಪಂದ್ಯದಲ್ಲಿ 48 ರನ್ಗೆ 1 ವಿಕೆಟ್ ಕಬಳಿಸಿದ್ದಲ್ಲದೆ, ಸರಣಿಯಲ್ಲಿ ಸತತ ಅರ್ಧಶತಕಗಳನ್ನು ದಾಖಲಿಸಿದ್ದಾರೆ. 302 ರೇಟಿಂಗ್ ಪಾಯಿಂಟ್ಸ್ ನೊಂದಿಗೆ ನಬಿ(292) ಹಾಗೂ ಉಮರ್ಝೈ(296)ಅವರನ್ನು ಹಿಂದಿಕ್ಕಿದರು.
ರಝಾ ಭರ್ಜರಿ ಬ್ಯಾಟಿಂಗ್ ನ ಮೂಲಕ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ 9 ಸ್ಥಾನ ಮೇಲಕ್ಕೇರಿ 22ನೇ ಸ್ಥಾನ ತಲುಪಿದ್ದಾರೆ.
ಸರಣಿಯನ್ನು ಜಯಿಸಿದ್ದ ಶ್ರೀಲಂಕಾ ತಂಡದ ಪಥುಮ್ ನಿಸ್ಸಾಂಕ 122 ಹಾಗೂ 76 ರನ್ ಗಳಿಸಿದ ಕಾರಣ ರ್ಯಾಂಕಿಂಗ್ ನಲ್ಲಿ 7 ಸ್ಥಾನ ಮೇಲಕ್ಕೇರಿ 13ನೇ ಸ್ಥಾನ ತಲುಪಿದ್ದಾರೆ. ಜನಿತ್ ಲಿಯನಗೆ 13 ಸ್ಥಾನಗಳನ್ನು ಭಡ್ತಿ ಪಡೆದು 29ನೇ ರ್ಯಾಂಕಿ ಗೆ ತಲುಪಿದ್ದಾರೆ.
ಬೌಲಿಂಗ್ ಪಟ್ಟಿಯಲ್ಲಿ ವೇಗದ ಬೌಲರ್ಗಳಾದ ಅಸಿತ ಫೆರ್ನಾಂಡೊ ಹಾಗೂ ದಿಲ್ಶನ್ ಮದುಶಂಕ ಕ್ರಮವಾಗಿ 31ನೇ ಹಾಗೂ 52ನೇ ಸ್ಥಾನ ತಲುಪಿದ್ದಾರೆ.
ಲೀಡ್ಸ್ ನಲ್ಲಿ ಮಂಗಳವಾರ ಇಂಗ್ಲೆಂಡ್ ತಂಡ ವಿರುದ್ಧ ಸುಲಭ ಜಯ ದಾಖಲಿಸಿರುವ ದಕ್ಷಿಣ ಆಫ್ರಿಕಾ ತಂಡದ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ 690 ಅಂಕದೊಂದಿಗೆ ಏಕದಿನ ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಲುಂಗಿ ಗಿಡಿ 23ನೇ ರ್ಯಾಂಕಿಗೆ ತಲುಪಿದ್ದಾರೆ. ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ 571 ಅಂಕದೊಂದಿಗೆ 19ನೇ ಸ್ಥಾನಕ್ಕೇರಿ ಟಾಪ್-20ರಲ್ಲಿ ಸ್ಥಾನ ಪಡೆದರು.
ಟ-20 ರ್ಯಾಂಕಿಂಗ್ ನಲ್ಲಿ ಮುಹಮ್ಮದ್ ನಬಿ ಆಲ್ರೌಂಡರ್ಗಳ ಪೈಕಿ 2ನೇ ಸ್ಥಾನಕ್ಕೇರಿದರೆ, ಭಾರತದ ಹಾರ್ದಿಕ್ ಪಾಂಡ್ಯ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಫ್ಘಾನಿಸ್ತಾನದ ಇಬ್ರಾಹೀಂ ಝದ್ರಾನ್ ಟಾಪ್-20 ಬ್ಯಾಟರ್ ಎನಿಸಿಕೊಂಡಿದ್ದಾರೆ.







