ಐಸಿಸಿ ಏಕದಿನ ರ್ಯಾಂಕಿಂಗ್ | ವಿರಾಟ್ ಕೊಹ್ಲಿಯೇ ನಂ.1

ವಿರಾಟ್ ಕೊಹ್ಲಿ | Photo Credit : PTI
ಹೊಸದಿಲ್ಲಿ, ಜ.14: ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸದ್ಯ ಶ್ರೇಷ್ಠ ಫಾರ್ಮ್ನಲ್ಲಿರುವ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನಕ್ಕೆ ಮರಳಿದ್ದಾರೆ.
ವಡೋದರದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 93 ರನ್ ಗಳಿಸಿದ್ದ ಕೊಹ್ಲಿ ಅವರು 2021ರ ಜುಲೈ ನಂತರ ಮೊದಲ ಬಾರಿಗೆ ಅಗ್ರ ಸ್ಥಾನಕ್ಕೇರಿದ್ದಾರೆ.
ಕೊಹ್ಲಿ ಅರ್ಧಶತಕದ ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿ ಭಾರತವು ನಾಲ್ಕು ವಿಕೆಟ್ ಗಳ ಅಂತರದಿಂದ ಜಯಶಾಲಿಯಾಗಿದ್ದು, 37 ವರ್ಷದ ಕೊಹ್ಲಿ ಈಗಲೂ 50 ಓವರ್ ಗಳ ಕ್ರಿಕೆಟ್ ನಲ್ಲಿ ‘ರನ್ ಯಂತ್ರ’ ಎಂಬ ಖ್ಯಾತಿಗೆ ತಕ್ಕಂತೆ ಆಡುತ್ತಿದ್ದಾರೆ.
ಕೊಹ್ಲಿ 2013ರ ಅಕ್ಟೋಬರ್ ನಲ್ಲಿ ಮೊದಲ ಬಾರಿ ನಂ.1 ರ್ಯಾಂಕಿನ ಏಕದಿನ ಬ್ಯಾಟರ್ ಆಗಿ ಹೊರಹೊಮ್ಮಿದ್ದರು. ಒಟ್ಟು 825 ದಿನಗಳ ಕಾಲ ವಿಶ್ವದ ನಂ.1 ಏಕದಿನ ಬ್ಯಾಟರ್ ಆಗಿ ಕೊಹ್ಲಿ ಮಿಂಚಿದ್ದಾರೆ. ಇದು ಭಾರತೀಯ ಬ್ಯಾಟರ್ ನ ಶ್ರೇಷ್ಠ ಸಾಧನೆಯಾಗಿದೆ.
ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ರ್ಯಾಂಕಿಂಗ್ ನಲ್ಲಿ ಐದನೇ ಸ್ಥಾನ ಉಳಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಅಗ್ರ-10ರಲ್ಲಿರುವ ಇನ್ನೋರ್ವ ಆಟಗಾರರಾಗಿದ್ದಾರೆ.
ನ್ಯೂಝಿಲ್ಯಾಂಡ್ನ ಡ್ಯಾರಿಲ್ ಮಿಚೆಲ್ ಮೊದಲ ಪಂದ್ಯದಲ್ಲಿ 84 ರನ್ ಗಳಿಸಿದ ಕಾರಣ ಭಡ್ತಿ ಪಡೆದಿದ್ದು, ಕೊಹ್ಲಿಗಿಂತ ಕೇವಲ ಒಂದು ಅಂಕದಿಂದ ಹಿಂದೆ ಇದ್ದಾರೆ.
ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಭಾರತದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಐದು ಸ್ಥಾನ ಮೇಲಕ್ಕೇರಿ 15ನೇ ಸ್ಥಾನ ತಲುಪಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ 41 ರನ್ಗೆ ನಾಲ್ಕು ವಿಕೆಟ್ ಗಳನ್ನು ಕಬಳಿಸಿದ್ದ ಕಿವೀಸ್ ವೇಗದ ಬೌಲರ್ ಕೈಲ್ ಜೆಮೀಸನ್ 27 ಸ್ಥಾನಗಳಲ್ಲಿ ಭಡ್ತಿ ಪಡೆದು 69ನೇ ಸ್ಥಾನ ಹಂಚಿಕೊಂಡಿದ್ದಾರೆ.







