ಐಸಿಸಿ ಏಕದಿನ ರ್ಯಾಂಕಿಂಗ್ | ಅಗ್ರ-10ಕ್ಕೆ ಜೋ ರೂಟ್ ಪ್ರವೇಶ

ಜೋ ರೂಟ್ | Photo Credit : PTI
ಹೊಸದಿಲ್ಲಿ, ಜು.22: ಭಾರತ ತಂಡದ ವಿರುದ್ಧ ಇತ್ತೀಚೆಗೆ ನಡೆದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿರುವ ಇಂಗ್ಲೆಂಡ್ ಕ್ರಿಕೆಟ್ ತಂಡವು ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಪ್ರಗತಿ ಸಾಧಿಸಿದೆ. ಸರಣಿಯಲ್ಲಿ ಅಜೇಯವಾಗುಳಿದು ಅಮೋಘ ಪ್ರದರ್ಶನ ನೀಡಿರುವ ಹಿರಿಯ ಬ್ಯಾಟರ್ ಜೋ ರೂಟ್ ಟಾಪ್-10ಕ್ಕೆ ಮರಳಿದ್ದಾರೆ.
‘ಸರಣಿಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದ ರೂಟ್, ಔಟಾಗದೆ 76, 99 ಹಾಗೂ 74 ರನ್ ಗಳಿಸಿದ್ದರು. ಇದರೊಂದಿಗೆ 2018ರ ನಂತರ ಇಂಗ್ಲೆಂಡ್ ತಂಡ ಮೊದಲ ಬಾರಿ ದ್ವಿಪಕ್ಷೀಯ ಏಕದಿನ ಸರಣಿ ಗೆಲ್ಲುವಲ್ಲಿ ನೆರವಾಗಿದ್ದರು. ಸ್ಥಿರ ಪ್ರದರ್ಶನ ನೀಡಿರುವ ರೂಟ್ ನಾಲ್ಕು ಸ್ಥಾನಗಳಲ್ಲಿ ಭಡ್ತಿ ಪಡೆದು ಐಸಿಸಿ ರ್ಯಾಂಕಿಂಗ್ನಲ್ಲಿ 8ನೇ ಸ್ಥಾನಕ್ಕೇರಿದ್ದಾರೆ. 2020ರ ಬಳಿಕ ಮೊದಲ ಬಾರಿ ಟಾಪ್-10ಕ್ಕೆ ಮರಳಿದ್ದಾರೆ.
ಲಾರ್ಡ್ಸ್ನಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯದ ವೇಳೆ 141 ರನ್ ಗಳಿಸಿ ದಾಖಲೆ ನಿರ್ಮಿಸಿದ್ದ ಇಂಗ್ಲೆಂಡ್ನ ಆರಂಭಿಕ ಆಟಗಾರ ಬೆನ್ ಡಕೆಟ್ ಅವರು 11 ಸ್ಥಾನಗಳಲ್ಲಿ ಭಡ್ತಿ ಪಡೆದು 19ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಎಡಗೈ ಬ್ಯಾಟರ್ ಡಕೆಟ್ ಅವರು ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ್ದಾರೆ.
ಟಾಪ್-5ರಲ್ಲಿ ಉಳಿದುಕೊಂಡ ರೋಹಿತ್, ಗಿಲ್ ಹಾಗೂ ಕೊಹ್ಲಿ
ಇಂಗ್ಲೆಂಡ್ ತಂಡದ ವಿರುದ್ಧ ಸರಣಿಯನ್ನು ಭಾರತ ಸೋತಿದ್ದರೂ ಹಲವಾರು ಭಾರತೀಯ ಬ್ಯಾಟರ್ಗಳು ಶ್ರೇಷ್ಠ ವೈಯಕ್ತಿಕ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ರ್ಯಾಂಕಿಂಗ್ನಲ್ಲಿ ಏರಿಕೆ ಕಂಡಿದ್ದಾರೆ.
ಲಾರ್ಡ್ಸ್ನಲ್ಲಿ 138 ರನ್ ಗಳಿಸಿದ್ದ ರೋಹಿತ್ ಶರ್ಮಾ ಅವರು ವಿರಾಟ್ ಕೊಹ್ಲಿಗಿಂತ ಕೇವಲ 9 ಅಂಕದಿಂದ ಹಿಂದಿದ್ದಾರೆ. ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ರೋಹಿತ್ ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಭಾರತ ತಂಡದ ನಾಯಕ ಶುಭಮನ್ ಗಿಲ್ ನಂ.2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಏಕದಿನ ಕ್ರಿಕೆಟ್ನ ವಿಶ್ವದ ನಂ.1 ರ್ಯಾಂಕಿನ ನ್ಯೂಝಿಲ್ಯಾಂಡ್ ಆಟಗಾರ ಡ್ಯಾರಿಲ್ ಮಿಚೆಲ್ಗಿಂತ ಕೇವಲ ಒಂದು ಅಂಕದಿಂದ ಹಿಂದಿದ್ದಾರೆ.
ಕಾರ್ಡಿಫ್ನಲ್ಲಿ ನಡೆದಿದ್ದ 2ನೇ ಏಕದಿನ ಪಂದ್ಯದಲ್ಲಿ ಹೋರಾಟಕಾರಿ 66 ರನ್ ಗಳಿಸಿದ್ದ ಮಧ್ಯಸರದಿಯ ಬ್ಯಾಟರ್ ಶ್ರೇಯಸ್ ಅಯ್ಯರ್ ಎರಡು ಸ್ಥಾನ ಮೇಲಕ್ಕೇರಿ 13ನೇ ಸ್ಥಾನ ಪಡೆದಿದ್ದಾರೆ.
ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ಸ್(ಟಾಪ್ 10)
ರ್ಯಾಂಕ್ ಆಟಗಾರ ತಂಡ ರೇಟಿಂಗ್ ಪಾಯಿಂಟ್ಸ್
1 ಡ್ಯಾರಿಲ್ ಮಿಚೆಲ್ ನ್ಯೂಝಿಲ್ಯಾಂಡ್ 802
2 ಶುಭಮನ್ ಗಿಲ್ ಭಾರತ 801
3 ವಿರಾಟ್ ಕೊಹ್ಲಿ ಭಾರತ 767
4 ರೋಹಿತ್ ಶರ್ಮಾ ಭಾರತ 758
5 ಇಬ್ರಾಹೀಂ ಝದ್ರಾನ್ ಅಫ್ಘಾನಿಸ್ತಾನ 712
6 ಬಾಬರ್ ಆಝಮ್ ಪಾಕಿಸ್ತಾನ 689
7 ಹ್ಯಾರಿ ಟೆಕ್ಟರ್ ಐರ್ಲ್ಯಾಂಡ್ 679
8 ಜೋ ರೂಟ್ ಇಂಗ್ಲೆಂಡ್ 674
9 ಶಾಯ್ ಹೋಪ್ ವೆಸ್ಟ್ಇಂಡೀಸ್ 672
10 ಚರಿತ್ ಅಸಲಂಕ ಶ್ರೀಲಂಕಾ 659






