ಐಸಿಸಿ ರ್ಯಾಂಕಿಂಗ್: ದಕ್ಷಿಣ ಆಫ್ರಿಕಾ ಆಟಗಾರರಿಗೆ ಭಡ್ತಿ

PC : ICC
ದುಬೈ: ತನ್ನ ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪ್ರಶಸ್ತಿ ಜಯಿಸಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಹಲವು ಆಟಗಾರರು ಪುರುಷರ ಟೆಸ್ಟ್ ಆಟಗಾರರ ರ್ಯಾಂಕಿಂಗ್ ನಲ್ಲಿ ಪ್ರಗತಿ ಸಾಧಿಸಿದ್ದಾರೆ.
ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಏಡೆನ್ ಮಾರ್ಕ್ರಮ್ 7 ಸ್ಥಾನ ಮೇಲಕ್ಕೇರಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ 11ನೇ ಸ್ಥಾನ ತಲುಪಿದರು. 10ನೇ ಸ್ಥಾನದಲ್ಲಿರುವ ನ್ಯೂಝಿಲ್ಯಾಂಡ್ ನ ಡ್ಯಾರಿಲ್ ಮಿಚೆಲ್ ಗಿಂತ 2 ಅಂಕ ಹಿಂದಿದ್ದಾರೆ.
ಬೌಲಿಂಗ್ ನಲ್ಲೂ ಕೊಡುಗೆ ನೀಡಿದ್ದ ಮಾರ್ಕ್ರಮ್ ಆಲ್ ರೌಂಡರ್ ಗಳ ರ್ಯಾಂಕಿಂಗ್ ನಲ್ಲಿ 44 ಸ್ಥಾನ ಭಡ್ತಿ ಪಡೆದಿದ್ದಾರೆ. ಮಧ್ಯಮ ಸರದಿಯ ಬ್ಯಾಟರ್ ಡೇವಿಡ್ ಬೆಡಿಂಗ್ ಹ್ಯಾಮ್ 17 ಸ್ಥಾನ ಮೇಲಕ್ಕೇರಿ 40ನೇ ಸ್ಥಾನದಲ್ಲಿದ್ದಾರೆ.
ಡಬ್ಲ್ಯುಟಿಸಿ ಫೈನಲ್ ನಲ್ಲಿ ಸ್ಫೂರ್ತಿಯುತ ಪ್ರದರ್ಶನ ನೀಡಿದ್ದ ಲುಂಗಿ ಗಿಡಿ ಬೌಲಿಂಗ್ ರ್ಯಾಂಕಿಂಗ್ ನಲ್ಲಿ 7 ಸ್ಥಾನ ಮೇಲಕ್ಕೇರಿ 37ನೇ ಸ್ಥಾನ ಹಂಚಿಕೊಂಡಿದ್ದಾರೆ. ಒಟ್ಟು 9 ವಿಕೆಟ್ಗಳ ಗೊಂಚಲು ಪಡೆದಿದ್ದ ಕಗಿಸೊ ರಬಾಡ 2ನೇ ಸ್ಥಾನ ಕಾಯ್ದುಕೊಂಡಿದ್ದು, ಭಾರತದ ಜಸ್ಪ್ರಿತ್ ಬುಮ್ರಾ 908 ಅಂಕ ಗಳಿಸಿ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ.
5 ವಿಕೆಟ್ ಗೊಂಚಲು ಹಾಗೂ 2ನೇ ಇನಿಂಗ್ಸ್ ನಲ್ಲಿ ದಿಟ್ಟ ಅರ್ಧಶತಕ ಗಳಿಸಿದ್ದ ಆಸ್ಟ್ರೇಲಿಯದ ಮಿಚೆಲ್ ಸ್ಟಾರ್ಕ್ ಅವರು ಬೌಲಿಂಗ್ ಹಾಗೂ ಆಲ್ರೌಂಡರ್ಗಳ ರ್ಯಾಂಕಿಂಗ್ ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ.
ಇದೇ ವೇಳೆ, ಭಾರತೀಯ ಆಟಗಾರರು ರ್ಯಾಂಕಿಂಗ್ನಲ್ಲಿ ತಮ್ಮ ಸ್ಥಾನ ಕಾಯ್ದುಕೊಂಡಿದ್ದಾರೆ.
ಬ್ಯಾಟರ್ ಗಳ ಪೈಕಿ ಯಶಸ್ವಿ ಜೈಸ್ವಾಲ್ ಹಾಗೂ ರಿಷಭ್ ಪಂತ್ ಕ್ರಮವಾಗಿ 4ನೇ ಹಾಗೂ 8ನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಸ್ಟಾರ್ಕ್ ಜೊತೆಗೆ 10ನೇ ಸ್ಥಾನ ಹಂಚಿಕೊಂಡಿರುವ ರವೀಂದ್ರ ಜಡೇಜ ಅವರು ಆಲ್ ರೌಂಡರ್ ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.







