ಏಷ್ಯಾ ಕಪ್ ಹ್ಯಾಂಡ್ ಶೇಕ್ ವಿವಾದ | ಪಾಕಿಸ್ತಾನದ ಬೇಡಿಕೆಯನ್ನು ತಿರಸ್ಕರಿಸಿದ ಐಸಿಸಿ

ಆಂಡಿ ಪೈಕ್ರಾಫ್ಟ್ | PC : @ICC
ದುಬೈ: ಏಷ್ಯಾ ಕಪ್ ನಲ್ಲಿ ನಡೆದ ಹ್ಯಾಂಡ್ಶೇಕ್ ವಿವಾದದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾಡಿದ ಗಂಭೀರ ಬೇಡಿಕೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತಳ್ಳಿ ಹಾಕಿದೆ.
ಭಾರತ-ಪಾಕಿಸ್ತಾನ ಗ್ರೂಪ್ ಹಂತದ ಪಂದ್ಯದಲ್ಲಿನ ವಿವಾದದ ಬಳಿಕ, ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಉಳಿದ ಪಂದ್ಯಗಳಿಂದ ದೂರವಿಡಬೇಕೆಂದು ಪಿಸಿಬಿ ಒತ್ತಾಯಿಸಿತ್ತು. ಆದರೆ, ತನಿಖೆ ನಡೆಸಿದ ನಂತರ ಐಸಿಸಿ ಪಿಸಿಬಿಗೆ ಈ ಬೇಡಿಕೆಯನ್ನು ಸ್ವೀಕರಿಸಲಾಗುವುದಿಲ್ಲವೆಂದು ಅಧಿಕೃತವಾಗಿ ತಿಳಿಸಿದೆ.
ಐಸಿಸಿ ಮೂಲಗಳ ಪ್ರಕಾರ, ಈ ವಿಷಯದ ಬಗ್ಗೆ ಕೆಲ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧಿಕಾರಿಗಳು ಹಾಗೂ ಪಿಸಿಬಿ ನಿರ್ದೇಶಕರಿಗೂ ಮುಂಚಿತವಾಗಿಯೇ ಮಾಹಿತಿ ನೀಡಲಾಗಿತ್ತು. ಇಬ್ಬರು ನಾಯಕರ ನಡುವೆ ಹ್ಯಾಂಡ್ಶೇಕ್ ನಡೆಯುವುದಿಲ್ಲ ಎಂಬುದು ಅವರಿಗೆ ತಿಳಿದಿತ್ತು ಎಂದು ವರದಿಗಳು ಸೂಚಿಸಿವೆ.
ಪಾಕಿಸ್ತಾನ ಮಂಡಳಿಯು ಭಾರತೀಯ ಆಟಗಾರರು ಹಾಗೂ ಪೈಕ್ರಾಫ್ಟ್ ವಿರುದ್ಧ ಅಧಿಕೃತವಾಗಿ ದೂರು ಸಲ್ಲಿಸಿತ್ತು. ಪೈಕ್ರಾಫ್ಟ್ ಪಾಕಿಸ್ತಾನ ನಾಯಕ ಸಲ್ಮಾನ್ ಆಘಾಗೆ, ಭಾರತೀಯ ಆಟಗಾರ ಸೂರ್ಯಕುಮಾರ್ ಯಾದವ್ ಜೊತೆ ಹ್ಯಾಂಡ್ಶೇಕ್ ಮಾಡಬಾರದು ಎಂದು ಸೂಚಿಸಿದ್ದಾರೆ ಎಂಬ ಆರೋಪವನ್ನು ಪಿಸಿಬಿ ತನ್ನ ಪತ್ರದಲ್ಲಿ ಮಾಡಿತ್ತು. ಎದುರಾಳಿ ತಂಡದೊಂದಿಗೆ ಹ್ಯಾಂಡ್ಶೇಕ್ ನಿರಾಕರಿಸುವ ಮೂಲಕ ಭಾರತೀಯ ಆಟಗಾರರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಾದಿಸಿತ್ತು.
ಇದೇ ವೇಳೆ, ಪಿಸಿಬಿಯು ಐಸಿಸಿಗೆ ಬರೆದ ಪತ್ರದಲ್ಲಿ, ಪೈಕ್ರಾಫ್ಟ್ ಅವರನ್ನು ತಕ್ಷಣವೇ ತೆಗೆದುಹಾಕದಿದ್ದರೆ, ಪಾಕಿಸ್ತಾನ ತಂಡವೇ ಟೂರ್ನಿಯಿಂದ ಹೊರಹೋಗಲಿದೆ ಎಂದು ಎಚ್ಚರಿಕೆ ನೀಡಿತ್ತು.
ಪಾಕಿಸ್ತಾನ ತಂಡ ತನ್ನ ಮುಂದಿನ ಪಂದ್ಯವನ್ನು ನಾಳೆ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ಆಡಲಿದೆ.
ಇದರ ನಡುವೆ, ಭಾರತ ವಿರುದ್ಧ ಏಳು ವಿಕೆಟ್ಗಳ ಸೋಲಿನ ನಂತರ, ಪಿಸಿಬಿ ತನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಉಸ್ಮಾನ್ ವಾಹ್ಲಾ ಅವರನ್ನು ಅಮಾನತುಗೊಳಿಸಿದೆ. ಹ್ಯಾಂಡ್ಶೇಕ್ ವಿವಾದದ ಕುರಿತು ತಕ್ಷಣ ಕ್ರಮ ಕೈಗೊಳ್ಳದ ಕಾರಣ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನ ಮಾಧ್ಯಮ ವರದಿಗಳು ತಿಳಿಸಿವೆ. ಮೊಹ್ಸಿನ್ ನಖ್ವಿ ನೇತೃತ್ವದ ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.







