ಐಸಿಸಿ ಟಿ20 ರ್ಯಾಂಕಿಂಗ್ಸ್ | ಅಭಿಶೇಕ್ ಶರ್ಮಾ 2ನೇ ಸ್ಥಾನಕ್ಕೆ
38 ಸ್ಥಾನಗಳನ್ನು ಜಿಗಿದ ಬ್ಯಾಟರ್

ಅಭಿಶೇಕ್ ಶರ್ಮಾ | PC: NDTV
ದುಬೈ: ಐಸಿಸಿ ಪರುಷರ ಟಿ20ಐ ಆಟಗಾರರ ರ್ಯಾಂಕಿಂಗ್ಸ್ನ ಬ್ಯಾಟರ್ಗಳ ವಿಭಾಗದಲ್ಲಿ, ಭಾರತದ ಆರಂಭಿಕ ಬ್ಯಾಟರ್ ಅಭಿಶೇಕ್ ಶರ್ಮಾ 38 ಸ್ಥಾನಗಳನ್ನು ಜಿಗಿದು ಎರಡನೇ ಸ್ಥಾನಕ್ಕೆ ಏರಿದ್ದಾರೆ. ಅದೇ ವೇಳೆ, ಬುಧವಾರ ಪ್ರಕಟಗೊಂಡ ರ್ಯಾಂಕಿಂಗ್ಸ್ನಲ್ಲಿ ಭಾರತದವರೇ ಆಗಿರುವ ತಿಲಕ್ ವರ್ಮಾ ಒಂದು ಸ್ಥಾನ ಕೆಳಕ್ಕೆ ಜಾರಿ ಮೂರನೇ ಸ್ಥಾನದಲ್ಲಿದ್ದಾರೆ.
ಮುಂಬೈಯಲ್ಲಿ ನಡೆದ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಅಭಿಶೇಕ್ ತನ್ನ ಜೀವನಶ್ರೇಷ್ಠ ಪ್ರದರ್ಶನ ನೀಡಿ 135 ರನ್ಗಳನ್ನು ಸಿಡಿಸಿದ್ದರು. ಅವರು ಈ ಮೊತ್ತವನ್ನು ಕೇವಲ 54 ಎಸೆತಗಳಲ್ಲಿ ಗಳಿಸಿದ್ದಾರೆ ಮತ್ತು ಅದರಲ್ಲಿ 13 ಸಿಕ್ಸರ್ಗಳಿದ್ದವು. ಅದು ಟಿ20 ಪಂದ್ಯವೊಂದರಲ್ಲಿ ಭಾರತೀಯ ಪುರುಷ ಆಟಗಾರನೊಬ್ಬನ ಗರಿಷ್ಠ ಮೊತ್ತವಾಗಿದೆ.
ಆ ಪಂದ್ಯವನ್ನು ಸುಲಭವಾಗಿ ಜಯಿಸಿದ ಭಾರತವು ಸರಣಿಯನ್ನು 4-1ರಿಂದ ಕೈವಶಪಡಿಸಿಕೊಂಡಿದೆ.
ಟಿ20ಐ ಬ್ಯಾಟರ್ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯದ ಟ್ರಾವಿಸ್ ಹೆಡ್ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದರೆ, ಅವರಿಂದ ಅಭಿಶೇಕ್ ಕೇವಲ 26 ರೇಟಿಂಗ್ ಅಂಕಗಳಿಂದ ಹಿಂದಿದ್ದಾರೆ.
ಭಾರತೀಯ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಐದನೇ ಸ್ಥಾನದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ 5 ಸ್ಥಾನ ಮೇಲಕ್ಕೇರಿ 51ನೇ ಸ್ಥಾನ ಗಳಿಸಿದರೆ, ಶಿವಮ್ ದುಬೆ 38 ಸ್ಥಾನಗಳನ್ನು ಏರಿ 58ನೇ ಸ್ಥಾನದಲ್ಲಿದ್ದಾರೆ.
ಬೌಲರ್ಗಳ ವಿಭಾಗದಲ್ಲಿ, ಭಾರತೀಯ ಸ್ಪಿನ್ನರ್ ವರುಣ್ ಚಕ್ರವರ್ತಿ ಮೂರು ಸ್ಥಾನಗಳನ್ನು ಏರಿ ಆದಿಲ್ ರಶೀದ್ರೊಂದಿಗೆ ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ಗಳಿಸಿರುವ 14 ವಿಕೆಟ್ಗಳು ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಅವರ ಭಡ್ತಿಯಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿವೆ.
ಇನ್ನೋರ್ವ ಸ್ಪಿನ್ನರ್ ರವಿ ಬಿಷ್ಣೋಯ್ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಐದು ವಿಕೆಟ್ಗಳನ್ನು ಗಳಿಸಿದ ಆಧಾರದಲ್ಲಿ, ನಾಲ್ಕು ಸ್ಥಾನಗಳನ್ನು ಮೇಲೇರಿ ಆರನೇ ಸ್ಥಾನವನ್ನು ವಹಿಸಿಕೊಂಡಿದ್ದಾರೆ. ಎಡಗೈ ವೇಗಿ ಅರ್ಶದೀಪ್ ಸಿಂಗ್ 9ನೇ ಸ್ಥಾನ ಗಳಿಸಿದ್ದು, ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.
ವೆಸ್ಟ್ ಇಂಡೀಸ್ ಸ್ಪಿನ್ನರ್ ಅಕೀಲ್ ಹುಸೈನ್ ಅಗ್ರ ಸ್ಥಾನವನ್ನು ಮರಳಿ ಪಡೆದುಕೊಂಡಿದ್ದಾರೆ. ಒಂದು ವಾರದ ಮೊದಲು ಅವರು ಈ ಸ್ಥಾನವನ್ನು ಇಂಗ್ಲೆಂಡ್ ತಂಡದ ಆದಿಲ್ ರಶೀದ್ಗೆ ಬಿಟ್ಟುಕೊಟ್ಟಿದ್ದರು.
► ಟೆಸ್ಟ್ ರ್ಯಾಂಕಿಂಗ್ಸ್: ಬುಮ್ರಾ ಅಗ್ರಸ್ಥಾನದಲ್ಲಿ, ಜೈಸ್ವಾಲ್ 4ನೇ ಸ್ಥಾನದಲ್ಲಿ
ಟೆಸ್ಟ್ ಬ್ಯಾಟರ್ಗಳ ಪಟ್ಟಿಯಲ್ಲಿ ಯಶಸ್ವಿ ಜೈಸ್ವಾಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅಗ್ರ ಸ್ಥಾನದಲ್ಲಿ ಜೋ ರೂಟ್ ಇದ್ದರೆ, ಎರಡನೇ ಸ್ಥಾನದಲ್ಲಿ ಹ್ಯಾರಿ ಬ್ರೂಕ್ ಇದ್ದಾರೆ. ಮೂರನೇ ಸ್ಥಾನವನ್ನು ನ್ಯೂಝಿಲ್ಯಾಂಡ್ನ ಕೇನ್ ವಿಲಿಯಮ್ಸನ್ ಆಕ್ರಮಿಸಿಕೊಂಡಿದ್ದಾರೆ.
ಟೆಸ್ಟ್ ಬೌಲರ್ಗಳ ವಿಭಾಗದಲ್ಲಿ, ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಭಾರತದ ಜಸ್ಪ್ರೀತ್ ಬುಮ್ರಾ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.