ICC ಟಿ-20 ರ್ಯಾಂಕಿಂಗ್ | ದ್ವಿತೀಯ ಸ್ಥಾನಕ್ಕೇರಿದ ಅಭಿಷೇಕ್ ಶರ್ಮಾ : ಟಾಪ್-10ರೊಳಗೆ ಜಸ್ಪ್ರಿತ್ ಬುಮ್ರಾ

ಜಸ್ಪ್ರಿತ್ ಬುಮ್ರಾ | Photo Credit : PTI
ಹೊಸದಿಲ್ಲಿ: ಅಫ್ಘಾನಿಸ್ತಾನದ ವಿರುದ್ಧ ಈಗ ನಡೆಯುತ್ತಿರುವ ಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡದ ಆಟಗಾರರು ಹೊಸ ಐಸಿಸಿ ರ್ಯಾಂಕಿಂಗ್ನಲ್ಲಿ ಮಹತ್ವದ ಸಾಧನೆಗೈದಿದ್ದಾರೆ. ಬ್ಯಾಟರ್ಗಳ ಪೈಕಿ ಅಭಿಷೇಕ್ ಶರ್ಮಾ ಎರಡನೇ ಸ್ಥಾನಕ್ಕೇರಿದರೆ, ಬೌಲರ್ಗಳಲ್ಲಿ ವರುಣ್ ಚಕ್ರವರ್ತಿ ಟಾಪ್-5ರಲ್ಲಿ ಸ್ಥಾನ ಪಡೆದಿದ್ದಾರೆ.
ಹಾಲಿ ಟಿ-20 ವಿಶ್ವಕಪ್ ಚಾಂಪಿಯನ್ ಹೊಸದಿಲ್ಲಿಯಲ್ಲಿ ನಡೆಯುತ್ತಿರುವ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಮೊದಲೆರಡು ಪಂದ್ಯಗಳಲ್ಲಿ ಬಹುತೇಕ ಆಟಗಾರರು ಮಿಂಚಿದ್ದಾರೆ. ತಮ್ಮ ಪ್ರದರ್ಶನದ ಮೂಲಕ ಜಸ್ಪ್ರಿತ್ ಬುಮ್ರಾ, ಅರ್ಷದೀಪ ಸಿಂಗ್, ಅಕ್ಷರ್ ಪಟೇಲ್ ಹಾಗೂ ಸಂಜು ಸ್ಯಾಮ್ಸನ್ ರ್ಯಾಂಕಿಂಗ್ನಲ್ಲಿ ಪ್ರಗತಿ ಸಾಧಿಸಿದ್ದಾರೆ.
ಅಭಿಷೇಕ್ ಸರಣಿಯಲ್ಲಿ ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಮೊದಲ ಪಂದ್ಯದಲ್ಲಿ 82 ರನ್ ಗಳಿಸಿದ್ದರು. ಹೀಗಾಗಿ ಹೊಸ ಐಸಿಸಿ ಟಿ-20 ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
ಎಡಗೈ ಬ್ಯಾಟರ್ ಅಭಿಷೇಕ್ ಪಾಕಿಸ್ತಾನದ ಸಾಹಿಬ್ರಝಾ ಫರ್ಹಾನ್ರನ್ನು ಹಿಂದಿಕ್ಕಿದ್ದು, ಸಹ ಆಟಗಾರ ಇಶಾನ್ ಕಿಶನ್ಗಿಂತ ಹಿಂದಿದ್ದಾರೆ. ಕಿಶನ್ ಅಗ್ರಸ್ಥಾನ ಅಲಂಕರಿಸಿದ್ದಾರೆ. ಅಭಿಷೇಕ್ ಹಾಗೂ ಕಿಶನ್ ನಡುವೆ 51 ರೇಟಿಂಗ್ ಪಾಯಿಂಟ್ಸ್ ಅಂತರವಿದೆ. ಎರಡನೇ ಟಿ-20ಯಲ್ಲಿ ಅರ್ಧಶತಕ ಗಳಿಸಿರುವ ಸಂಜು ಸ್ಯಾಮ್ಸನ್ ಕೂಡ ನಾಲ್ಕು ಸ್ಥಾನ ಮೇಲಕ್ಕೇರಿ 30ನೇ ರ್ಯಾಂಕ್ ತಲುಪಿದ್ದಾರೆ.
ಭಾರತೀಯ ಬೌಲರ್ಗಳು ಗಣನೀಯ ಪ್ರಗತಿ ಸಾಧಿಸಿದ್ದು, ವರುಣ್ ಚಕ್ರವರ್ತಿ ಎರಡು ಸ್ಥಾನ ಮೇಲಕ್ಕೇರಿ ಐದನೇ ಸ್ಥಾನ ತಲುಪಿದ್ದಾರೆ. ಬುಮ್ರಾ ಏಳು ಸ್ಥಾನ ಭಡ್ತಿ ಪಡೆದು ಟಾಪ್-10ಕ್ಕೆ ಪ್ರವೇಶಿಸಿದರು. ಅರ್ಷದೀಪ ಸಿಂಗ್ 11 ಸ್ಥಾನ ಜಿಗಿದು 14ನೇ ಸ್ಥಾನಕ್ಕೇರಿದರೆ, ಅಕ್ಷರ್ ಪಟೇಲ್ ಆರು ಸ್ಥಾನ ಮೇಲಕ್ಕೆರಿ 27ನೇ ಸ್ಥಾನ ತಲುಪಿದ್ದಾರೆ.
ಟಿ-20 ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ಅಫ್ಘಾನಿಸ್ತಾನದ ಆಲ್ರೌಂಡರ್ ಅಝ್ಮತುಲ್ಲಾ ಉಮರ್ಝೈ ಕೂಡ ಭಡ್ತಿ ಪಡೆದಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ ಉಮರ್ಝೈ ಅರ್ಧಶತಕ ಗಳಿಸಿದ್ದರು.






