ಐಸಿಸಿ ಟಿ20 ರ್ಯಾಂಕಿಂಗ್: ದ್ವಿತೀಯ ಸ್ಥಾನಕ್ಕೇರಿದ ತಿಲಕ್ ವರ್ಮಾ

Photo Credit: Vijay Soneji
ಹೊಸದಿಲ್ಲಿ: ಹೊಸ ಟಿ20 ರ್ಯಾಂಕಿಂಗ್ ನಲ್ಲಿ ಭಾರತದ ಯುವ ಬ್ಯಾಟರ್ ತಿಲಕ್ ವರ್ಮಾ ಒಂದು ಸ್ಥಾನ ಮೇಲಕ್ಕೇರಿ ದ್ವಿತೀಯ ಸ್ಥಾನ ತಲುಪಿದರೆ, ರಾಜ್ಕೋಟ್ ನಲ್ಲಿ ನಡೆದಿರುವ ಮೂರನೇ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದಿರುವ ವರುಣ್ ಚಕ್ರವರ್ತಿ ಬೌಲರ್ ಗಳ ರ್ಯಾಂಕಿಂಗ್ ನಲ್ಲಿ 25 ಸ್ಥಾನ ಭಡ್ತಿ ಪಡೆದು 5ನೇ ಸ್ಥಾನ ತಲುಪಿದ್ದಾರೆ.
ಆಸ್ಟ್ರೇಲಿಯದ ಟ್ರಾವಿಸ್ ಹೆಡ್ ಬ್ಯಾಟರ್ ಗಳ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳಲ್ಲಿ ಔಟಾಗದೆ 19, ಔಟಾಗದೆ 72 ಹಾಗೂ 18 ರನ್ ಗಳಿಸಿದ ತಿಲಕ್ ವರ್ಮಾ ಉತ್ತಮ ಫಾರ್ಮ್ನಲ್ಲಿದ್ದಾರೆ.
ವರ್ಮಾ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಉತ್ತಮ ಸ್ಕೋರ್ ಗಳಿಸಿದರೆ, ತನಗಿಂತ 23 ಅಂಕ ಮುನ್ನಡೆಯಲ್ಲಿರುವ, ಸದ್ಯ ಟೆಸ್ಟ್ ಕ್ರಿಕೆಟ್ ನಲ್ಲಿ ಆಡುತ್ತಿರುವ ಹೆಡ್ ರನ್ನು ಹಿಂದಿಕ್ಕಬಹುದು.
ಒಂದು ವೇಳೆ ವರ್ಮಾ ಅವರು ಹೆಡ್ ರನ್ನು ಹಿಂದಿಕ್ಕುವಲ್ಲಿ ಸಫಲರಾದರೆ, ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ ಯುವ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪಾಕಿಸ್ತಾನದ ಆಟಗಾರ ಬಾಬರ್ ಆಝಂ ಈ ದಾಖಲೆಯನ್ನು ಹೊಂದಿದ್ದಾರೆ. ಬಾಬರ್ ಕೇವಲ 23ನೇ ವಯಸ್ಸಿನಲ್ಲಿ ನಂ.1 ರ್ಯಾಂಕಿನ ಟಿ20 ಬ್ಯಾಟರ್ ಎನಿಸಿಕೊಂಡಿದ್ದರು.
ವರ್ಮಾ ಸದ್ಯ 832 ಅಂಕ ಗಳಿಸಿದ್ದು, ಸೂರ್ಯಕುಮಾರ್, ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ನಂತರ ಭಾರತದ 4ನೇ ಶ್ರೇಷ್ಠ ಬ್ಯಾಟರ್ ಆಗಿದ್ದಾರೆ.
ಐದು ವಿಕೆಟ್ ಗೊಂಚಲು ಪಡೆದಿರುವ ಸ್ಪಿನ್ನರ್ ಚಕ್ರವರ್ತಿ ಬೌಲಿಂಗ್ ಪಟ್ಟಿಯಲ್ಲಿ ಭಾರೀ ಪ್ರಗತಿ ಸಾಧಿಸಿದರು. ಐದು ಸ್ಥಾನ ಭಡ್ತಿ ಪಡೆದು ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಅಕ್ಷರ್ ಪಟೇಲ್ ಟಾಪ್-10ರ ಸನಿಹದಲ್ಲಿದ್ದಾರೆ.
ಪ್ರಮುಖ ಬೆಳವಣಿಗೆಯೊಂದರಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ವಿಶ್ವದ ನಂ.1 ಬೌಲರ್ ಸ್ಥಾನ ವಶಪಡಿಸಿಕೊಂಡಿದ್ದಾರೆ. ರಶೀದ್ 2023ರ ಅಂತ್ಯದಲ್ಲಿ ಮೊದಲ ಬಾರಿ ಅಗ್ರ ಸ್ಥಾನ ಪಡೆದಿದ್ದರು. ಕಳೆದ ವರ್ಷ ಸ್ಪಿನ್ನರ್ ಅಕೀಲ್ ಹುಸೈನ್ ಅಗ್ರ ಸ್ಥಾನಕ್ಕೇರುವ ತನಕವೂ ರಶೀದ್ ಅದೇ ಸ್ಥಾನದಲ್ಲಿದ್ದರು.
ಭಾರತ ವಿರುದ್ಧ 3 ಪಂದ್ಯಗಳಲ್ಲಿ ಮಿತವ್ಯಯಿ ಎನಿಸಿಕೊಂಡಿದ್ದ ರಶೀದ್ ಒಂದು ಸ್ಥಾನ ಭಡ್ತಿ ಪಡೆದು ಪ್ರಮುಖ ಟಿ20 ಬೌಲರ್ ಆಗಿ ಹೊರಹೊಮ್ಮಿದ್ದಾರೆ. 36ರ ಹರೆಯದ ರಶೀದ್ ಭಾರತದಲ್ಲಿ 3 ಪಂದ್ಯಗಳಲ್ಲಿ 3 ವಿಕೆಟ್ ಪಡೆದಿದ್ದಾರೆ.







