ಪಾಕಿಸ್ತಾನದಿಂದ ಟಿ–20 ವಿಶ್ವಕಪ್ ಬಹಿಷ್ಕಾರ ಬೆದರಿಕೆ: ಕಠಿಣ ಕ್ರಮಕ್ಕೆ ಮುಂದಾದ ಐಸಿಸಿ

ಐಸಿಸಿ ಮುಖ್ಯಸ್ಥ ಜೈ ಶಾ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ | Photo: NDTV
ಹೊಸದಿಲ್ಲಿ: ಟಿ–20 ವಿಶ್ವಕಪ್ನ ಗಡುವು ಸಮೀಪಿಸುತ್ತಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ನಡುವಿನ ಸಂಬಂಧ ಮುರಿದು ಬೀಳುವ ಹಂತಕ್ಕೆ ತಲುಪಿದೆ. ಬಾಂಗ್ಲಾದೇಶಕ್ಕೆ ಬೆಂಬಲ ವ್ಯಕ್ತಪಡಿಸಿ ಟಿ–20 ವಿಶ್ವಕಪ್ ಅನ್ನು ಬಹಿಷ್ಕರಿಸುವ ಬೆದರಿಕೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಒಡ್ಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಪಾಕಿಸ್ತಾನದ ವಿರುದ್ಧ ಅಭೂತಪೂರ್ವ ದಿಗ್ಬಂಧನಗಳನ್ನು ಹೇರಬಹುದು ಎಂದು ವರದಿಯಾಗಿದೆ.
ಪಾಕಿಸ್ತಾನದ ಮಧ್ಯಂತರ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ, “ಐಸಿಸಿ ದ್ವಿಮುಖ ನೀತಿ ಅನುಸರಿಸುತ್ತಿದೆ” ಎಂಬ ಹೇಳಿಕೆ ನೀಡಿರುವುದರಿಂದ ಈ ವಿವಾದ ಸ್ಫೋಟಗೊಂಡಿದೆ. ಈ ಹಿಂದೆ ಪಾಕಿಸ್ತಾನದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ಸ್ಥಳಾಂತರ ಮಾಡಿರುವ ನಿದರ್ಶನವಿದ್ದರೂ, ಬಾಂಗ್ಲಾದೇಶದ ಪಂದ್ಯಗಳನ್ನು ಸ್ಥಳಾಂತರಿಸಬೇಕು ಎಂಬ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಬೆಂಬಲ ಸೂಚಿಸಿರುವುದು ಸೇರಿದಂತೆ ಮೊಹ್ಸಿನ್ ನಖ್ವಿ ಅವರ ಸಂಘರ್ಷಾತ್ಮಕ ಹೇಳಿಕೆಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಸಮಾಧಾನಗೊಂಡಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ. ಪಾಕಿಸ್ತಾನ ತಂಡವು ಟಿ–20 ವಿಶ್ವಕಪ್ನಿಂದ ಹಿಂದೆ ಸರಿಯಲಿದೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡುವ ಮೂಲಕ ಮೊಹ್ಸಿನ್ ನಖ್ವಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಮುಜುಗರಕ್ಕೀಡು ಮಾಡಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಪಾಕಿಸ್ತಾನ ತಂಡವೇನಾದರೂ ಟಿ–20 ವಿಶ್ವಕಪ್ನಿಂದ ಹಿಂದೆ ಸರಿದರೆ, ಪಾಕಿಸ್ತಾನವನ್ನು ಕ್ರಿಕೆಟ್ ಆಟದಿಂದ ಏಕಾಂಗಿಯಾಗಿಸುವ ಕ್ರಮ ಸೇರಿದಂತೆ ಅಭೂತಪೂರ್ವ ದಿಗ್ಬಂಧನಗಳನ್ನು ಹೇರಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಂದಾಗಿದೆ ಎಂದು ಹೇಳಲಾಗಿದೆ. ಈ ಕಠಿಣ ಕ್ರಮಗಳಲ್ಲಿ ಎಲ್ಲ ದ್ವಿಪಕ್ಷೀಯ ಸರಣಿಗಳ ಅಮಾನತು, ಏಶ್ಯ ಕಪ್ನಿಂದ ಹೊರಹಾಕುವುದು ಹಾಗೂ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ವಿದೇಶಿ ತಾರಾ ಆಟಗಾರರು ಭಾಗವಹಿಸದಂತೆ ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸಿ ನಿರಾಕ್ಷೇಪಣಾ ಪತ್ರ ನೀಡದಿರುವುದು ಸೇರಿವೆ.
ಇಂತಹ ಕ್ರಮಗಳಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹಣಕಾಸು ಆದಾಯ ಕುಂಟಲಿದೆಯಲ್ಲದೆ, ರಾಷ್ಟ್ರೀಯ ತಂಡಕ್ಕೆ ಯಾವುದೇ ಪ್ರಮುಖ ಐಸಿಸಿ ಪಂದ್ಯಗಳಿಲ್ಲದೆ ಹೋಗುವುದರಿಂದ ಪಾಕಿಸ್ತಾನದ ದೇಶೀಯ ಕ್ರಿಕೆಟ್ನ ವಾಣಿಜ್ಯ ಮೌಲ್ಯ ನೆಲಕಚ್ಚಲಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ಬೆಂಬಲವಾಗಿ ಪಾಕಿಸ್ತಾನ ತಂಡ ಈವರೆಗೆ ಟಿ–20 ವಿಶ್ವಕಪ್ ಅನ್ನು ಬಹಿಷ್ಕರಿಸದಿದ್ದರೂ, ಈ ಕುರಿತು ಅಂತಿಮ ನಿರ್ಧಾರವನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಶರೀಫ್ ಕೈಗೊಳ್ಳಲಿದ್ದಾರೆ ಎಂದು ಮೊಹ್ಸಿನ್ ನಖ್ವಿ ಹೇಳಿದ್ದಾರೆ. ವಾಸ್ತವವಾಗಿ, ಬಾಂಗ್ಲಾದೇಶದ ನಿಲುವಿಗೆ ಪಾಕಿಸ್ತಾನ ಬೆಂಬಲ ಸೂಚಿಸಿರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯೂ ಬೆಂಬಲ ಸೂಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.







