ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಗ್ರ-20ರಲ್ಲಿ ಸ್ಥಾನ ಪಡೆದ ಯಶಸ್ವಿ ಜೈಸ್ವಾಲ್
ಚೊಚ್ಚಲ ಪಂದ್ಯದಲ್ಲೇ 75 ನೇ ಸ್ಥಾನಕ್ಕೇರಿದ ಸರ್ಫರಾಝ್!

ಜೈಸ್ವಾಲ್ | Photo: PTI
ಹೊಸದಿಲ್ಲಿ : ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಬ್ಯಾಟಿಂಗ್ ಪಟ್ಟಿಯಲ್ಲಿ 14 ಸ್ಥಾನ ಮೇಲಕ್ಕೇರಿ 15ನೇ ಸ್ಥಾನ ತಲುಪಿದ್ದಾರೆ.
ಇಂಗ್ಲೆಂಡ್ ವಿರುದ್ಧ ಈಗ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಸತತ ಪಂದ್ಯಗಳಲ್ಲಿ ದ್ವಿಶತಕ ಗಳಿಸಿದ ನಂತರ ರ್ಯಾಂಕಿಂಗ್ ನಲ್ಲಿ ಜೈಸ್ವಾಲ್ ಪ್ರಗತಿ ಸಾಧಿಸಿದ್ದಾರೆ. 22ರ ಹರೆಯದ ಎಡಗೈ ಬ್ಯಾಟರ್ ದ್ವಿಶತಕದ ಸಾಧನೆ ಮಾಡಿದ ವಿಶ್ವದ 8ನೇ ಕ್ರಿಕೆಟಿಗ ಹಾಗೂ ವಿನೋದ್ ಕಾಂಬ್ಳಿ ಹಾಗೂ ವಿರಾಟ್ ಕೊಹ್ಲಿ ನಂತರ ಮೂರನೇ ಭಾರತೀಯ ಆಟಗಾರನಾಗಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಭಾರತದ ಮೊದಲ ಇನಿಂಗ್ಸ್ ನಲ್ಲಿ ಜೈಸ್ವಾಲ್ 209 ರನ್ ಗಳಿಸಿದ್ದರು. ಆನಂತರ ರಾಜ್ಕೋಟ್ ನಲ್ಲಿ ನಡೆದ 3ನೇ ಟೆಸ್ಟ್ ನ ಎರಡನೇ ಇನಿಂಗ್ಸ್ ನಲ್ಲಿ 214 ರನ್ ಗಳಿಸಿದ್ದರು. ಭಾರತ ತಂಡವು ಇಂಗ್ಲೆಂಡ್ ವಿರುದ್ಧ 434 ರನ್ನಿಂದ ಜಯ ಸಾಧಿಸಿ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಲು ಜೈಸ್ವಾಲ್ ಪ್ರಮುಖ ಪಾತ್ರವಹಿಸಿದ್ದರು.
ರಾಜ್ಕೋಟ್ ಟೆಸ್ಟ್ ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ರವೀಂದ್ರ ಜಡೇಜ ಕೂಡ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಪ್ರಗತಿ ಸಾಧಿಸಿದ್ದಾರೆ. 3ನೇ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಶತಕ ಗಳಿಸಿರುವ ಜಡೇಜ 41ನೇ ಸ್ಥಾನದಿಂದ 34ನೇ ಸ್ಥಾನಕ್ಕೇರಿದ್ದಾರೆ.
3ನೇ ಪಂದ್ಯದಲ್ಲಿ ಏಳು ವಿಕೆಟ್ ಗೊಂಚಲು ಮೂಲಕ ಆಲ್ರೌಂಡ್ ಪ್ರದರ್ಶನ ನೀಡಿದ ಜಡೇಜ ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ.
ರಾಜ್ಕೋಟ್ ನಲ್ಲಿ 500 ಟೆಸ್ಟ್ ವಿಕೆಟ್ ಮೈಲಿಗಲ್ಲು ಸಾಧಿಸಿದ್ದ ಹಿರಿಯ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಬೌಲಿಂಗ್ ರ್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮೊದಲ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಆಲ್ರೌಂಡರ್ಗಳ ರ್ಯಾಂಕಿಂಗ್ ನಲ್ಲಿ ಜಡೇಜ ಹಾಗೂ ಅಶ್ವಿನ್ ತಮ್ಮ ಪ್ರಾಬಲ್ಯ ಮುಂದುವರಿಸಿದ್ದು ಅಗ್ರ-2 ಸ್ಥಾನಗಳನ್ನು ಪಡೆದಿದ್ದಾರೆ. ಜೀವನಶ್ರೇಷ್ಠ 469 ರೇಟಿಂಗ್ ಪಾಯಿಂಟ್ಸ್ ತಲುಪಿರುವ ಜಡೇಜ ಆಲ್ರೌಂಡರ್ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ರಾಜ್ಕೋಟ್ ನಲ್ಲಿ ಮೊದಲ ಇನಿಂಗ್ಸ್ ನಲ್ಲಿ 131 ರನ್ ಗಳಿಸಿದ್ದ ಭಾರತದ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಪಟ್ಟಿಯಲ್ಲಿ ಅಲ್ಪ ಸುಧಾರಣೆ ಕಂಡಿದ್ದು ಒಂದು ಸ್ಥಾನ ಮೇಲಕ್ಕೇರಿ 12ನೇ ಸ್ಥಾನ ತಲುಪಿದ್ದಾರೆ.
ಇನ್ನೋರ್ವ ಯುವ ಪ್ರತಿಭೆ ಶುಭಮನ್ ಗಿಲ್ 3ನೇ ಟೆಸ್ಟ್ ನ 2ನೇ ಇನಿಂಗ್ಸ್ ನಲ್ಲಿ 91 ರನ್ ಗಳಿಸಿದ ನಂತರ ಮೂರು ಸ್ಥಾನ ಭಡ್ತಿ ಪಡೆದು 35ನೇ ಸ್ಥಾನ ತಲುಪಿದ್ದಾರೆ.
ಚೊಚ್ಚಲ ಪಂದ್ಯವನ್ನಾಡಿರುವ ಸರ್ಫರಾಝ್ ಖಾನ್ ಹಾಗೂ ಧ್ರುವ್ ಜುರೆಲ್ ರ್ಯಾಂಕಿಂಗ್ ಗೆ ಪ್ರವೇಶ ಪಡೆದಿದ್ದು ಕ್ರಮವಾಗಿ 75ನೇ ಹಾಗೂ 100ನೇ ಸ್ಥಾನದಲ್ಲಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ ವಿರಾಟ್ ಕೊಹ್ಲಿ ಸರಣಿಯಲ್ಲಿ ಆಡದೇ ಇದ್ದರೂ ಅಗ್ರ-10 ಬ್ಯಾಟರ್ಗಳ ಪಟ್ಟಿಯಲ್ಲಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ. ಕೊಹ್ಲಿ 7ನೇ ಸ್ಥಾನ ಉಳಿಸಿಕೊಂಡಿದ್ದಾರೆ.
ಇಂಗ್ಲೆಂಡ್ ಪಾಳಯದಲ್ಲಿ ಆರಂಭಿಕ ಬ್ಯಾಟರ್ ಬೆನ್ ಡಕೆಟ್ ರ್ಯಾಂಕಿಂಗ್ ನಲ್ಲಿ 12 ಸ್ಥಾನ ಮೇಲಕ್ಕೇರಿ 13ನೇ ಸ್ಥಾನದಲ್ಲಿದ್ದಾರೆ. ಡಕೆಟ್ ಇಂಗ್ಲೆಂಡ್ನ ಮೊದಲ ಇನಿಂಗ್ಸ್ ನಲ್ಲಿ 153 ರನ್ ಗಳಿಸಿದ್ದರು.
ಇದೇ ವೇಳೆ ನ್ಯೂಝಿಲ್ಯಾಂಡ್ ಬ್ಯಾಟರ್ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮತ್ತೊಂದು ಶತಕವನ್ನು ಗಳಿಸಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಇದೀಗ ಅವರು 7 ಟೆಸ್ಟ್ ಪಂದ್ಯಗಳಲ್ಲಿ 7 ಶತಕಗಳನ್ನು ಗಳಿಸಿ ಮಹತ್ವದ ಸಾಧನೆ ಮಾಡಿದ್ದಾರೆ. ಅರವಿಂದ ಡಿಸಿಲ್ವ, ಮುಹಮ್ಮದ್ ಯೂಸುಫ್ ಹಾಗೂ ಕ್ಲೈಡ್ ವಾಲ್ಕಟ್ ಮಾತ್ರ ಈ ಸಾಧನೆ ಮಾಡಿದ್ದಾರೆ.







