ICC ಟೆಸ್ಟ್ ರ್ಯಾಂಕಿಂಗ್ | ಅಗ್ರ-10ರಲ್ಲಿ ಸ್ಥಾನ ಪಡೆದ ಅಫ್ಘಾನಿಸ್ತಾನದ ಮೊದಲ ಆಟಗಾರ ರಹಮತ್ ಶಾ

ರಹಮತ್ ಶಾ | Photo Credit : x
ದುಬೈ, ನ. 11: ಐಸಿಸಿ ಪುರುಷರ ಟೆಸ್ಟ್ ಆಟಗಾರರ ರ್ಯಾಂಕಿಂಗ್ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದ ಅಫ್ಘಾನಿಸ್ತಾನದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ರಹಮತ್ ಶಾ ಭಾಜನರಾಗಿದ್ದಾರೆ.
ಶಾರ್ಜಾದಲ್ಲಿ ಝಿಂಬಾಬ್ವೆ ವಿರುದ್ಧ ಶತಕ ಗಳಿಸಿದ್ದ 33ರ ವಯಸ್ಸಿನ ರಹಮತ್, ಟೆಸ್ಟ್ ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ ಏಳನೇ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ನಲ್ಲಿ 173 ರನ್ ಗಳಿಸಿದ್ದ ರಹಮತ್ ರ್ಯಾಂಕಿಂಗ್ನಲ್ಲಿ ಆರು ಸ್ಥಾನಗಳ ಭಡ್ತಿ ಪಡೆದಿದ್ದಾರೆ. ಭಾರತ ತಂಡದ ನಾಯಕ ಶುಭಮನ್ ಗಿಲ್, ದಕ್ಷಿಣ ಆಫ್ರಿಕದ ಐಡೆನ್ ಮರ್ಕ್ರಮ್ ಹಾಗೂ ಶ್ರೀಲಂಕಾದ ಕಮಿಂಡು ಮೆಂಡಿಸ್ ರಂತಹ ಪ್ರಮುಖ ಅಂತರ್ರಾಷ್ಟ್ರೀಯ ಬ್ಯಾಟರ್ಗಳನ್ನು ಹಿಂದಿಕ್ಕಿದ್ದಾರೆ.
ಟೆಸ್ಟ್ ವೃತ್ತಿಜೀವನದ ಐದನೇ ಶತಕ ದಾಖಲಿಸಿದ್ದ ರಹಮತ್, ಐಸಿಸಿ ಟೆಸ್ಟ್ ಬ್ಯಾಟರ್ ಗಳ ರ್ಯಾಂಕಿಂಗ್ ನ ಅಗ್ರ-10ಕ್ಕೆ ಪ್ರವೇಶಿಸಿದ ಅಫ್ಘಾನಿಸ್ತಾನದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಫ್ಘಾನಿಸ್ತಾನ ತಂಡವು ಏಕದಿನ ಕ್ರಿಕೆಟ್ ನಲ್ಲೂ ಈ ಹಿಂದೆ ಯಶಸ್ಸು ಕಂಡಿದೆ. ಈ ತಿಂಗಳ ಆರಂಭದಲ್ಲಿ ಐಸಿಸಿ ಪುರುಷರ ಏಕದಿನ ತಂಡಗಳ ರ್ಯಾಂಕಿಂಗ್ನಲ್ಲಿ ಮೊದಲ ಬಾರಿ ಆರನೇ ಸ್ಥಾನಕ್ಕೇರಿತ್ತು. ಝಿಂಬಾಬ್ವೆ ಹಾಗೂ ಬಾಂಗ್ಲಾದೇಶ ಒಳಗೊಂಡ ತ್ರಿಕೋನ ಸರಣಿಯನ್ನು ಗೆದ್ದ ಬಳಿಕ ಈ ಸಾಧನೆ ಮಾಡಿತ್ತು.
►ಟೆಸ್ಟ್ ರ್ಯಾಂಕಿಂಗ್ ನಲ್ಲಿ ಮಿಂಚಿದ ವೆಸ್ಟ್ಇಂಡೀಸ್ ಆಟಗಾರರು
ಬಾಂಗ್ಲಾದೇಶ ಹಾಗೂ ವೆಸ್ಟ್ಇಂಡೀಸ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿ ಮುಗಿದ ಬಳಿಕ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಗಮನಾರ್ಹ ಬದಲಾವಣೆಯಾಗಿದೆ.
ವೆಸ್ಟ್ಇಂಡೀಸ್ ಬ್ಯಾಟರ್ ಕಾವೆಮ್ ಹಾಜ್ 12 ಸ್ಥಾನಗಳ ಭಡ್ತಿ ಪಡೆದು 52ನೇ ಸ್ಥಾನಕ್ಕೇರಿದ್ದಾರೆ. ಬಾಂಗ್ಲಾದೇಶದ ತೌಹೀದ್ 60ನೇ ಸ್ಥಾನ ಪಡೆದಿದ್ದಾರೆ. ವಿಂಡೀಸ್ ನ ಮತ್ತೊಬ್ಬ ಬ್ಯಾಟರ್ ಆಮಿರ್ ಜಾಂಗೂ 28 ಸ್ಥಾನಗಳ ಭಡ್ತಿಯೊಂದಿಗೆ 62ನೇ ಸ್ಥಾನ ತಲುಪಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ವೆಸ್ಟ್ಇಂಡೀಸ್ ಸ್ಪಿನ್ನರ್ ಜೊಮೆಲ್ ವಾರಿಕನ್ ಟೆಸ್ಟ್ ಬೌಲರ್ಗಳ ರ್ಯಾಂಕಿಂಗ್ನಲ್ಲಿ 11 ಸ್ಥಾನಗಳ ಭಡ್ತಿ ಪಡೆದು 19ನೇ ಸ್ಥಾನಕ್ಕೇರಿದ್ದಾರೆ. ಇದರೊಂದಿಗೆ ಜೀವನಶ್ರೇಷ್ಠ ರೇಟಿಂಗ್ ದಾಖಲಿಸಿದ್ದಾರೆ.
ವಾರಿಕನ್ ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲೂ ಪ್ರಗತಿ ಸಾಧಿಸಿದ್ದು, ನಾಲ್ಕು ಸ್ಥಾನಗಳ ಭಡ್ತಿಯೊಂದಿಗೆ 31ನೇ ಸ್ಥಾನ ಪಡೆದಿದ್ದಾರೆ. ಅವರ ಸಹ ಆಟಗಾರ ಜಸ್ಟಿನ್ ಗ್ರೀವ್ಸ್ ಟೆಸ್ಟ್ ಆಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ಜಂಟಿ ಎಂಟನೇ ಸ್ಥಾನ ಪಡೆದಿದ್ದಾರೆ.
►ಏಕದಿನ ರ್ಯಾಂಕಿಂಗ್: ಅಕ್ಷರ್, ಅರ್ಷದೀಪ್, ಗುರ್ನೂರ್ ಗೆ ಭಡ್ತಿ
ನ್ಯೂಝಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳ ಬಳಿಕ ಪ್ರಕಟವಾದ ಐಸಿಸಿ ರ್ಯಾಂಕಿಂಗ್ನಲ್ಲಿ ಭಾರತದ ಹಲವು ಆಟಗಾರರು ಭಡ್ತಿ ಪಡೆದಿದ್ದಾರೆ.
ವೆಲ್ಲಿಂಗ್ಟನ್ ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 28 ರನ್ಗಳಿಗೆ ಎರಡು ವಿಕೆಟ್ ಪಡೆದಿದ್ದ ಭಾರತದ ಸ್ಪಿನ್ನರ್ ಅಕ್ಷರ್ ಪಟೇಲ್ ಏಕದಿನ ಬೌಲರ್ಗಳ ರ್ಯಾಂಕಿಂಗ್ನಲ್ಲಿ 23 ಸ್ಥಾನಗಳ ಭಡ್ತಿಯೊಂದಿಗೆ 21ನೇ ಸ್ಥಾನ ತಲುಪಿದ್ದಾರೆ.
ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಕೂಡ ಸರಣಿಯ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ಗಳ ಗೊಂಚಲು ಪಡೆದ ಹಿನ್ನೆಲೆಯಲ್ಲಿ 11 ಸ್ಥಾನಗಳ ಭಡ್ತಿ ಪಡೆದು 31ನೇ ಸ್ಥಾನಕ್ಕೇರಿದ್ದಾರೆ.
ಹೊಸ ರ್ಯಾಂಕಿಂಗ್ ನಲ್ಲಿ ಗುರ್ನೂರ್ ಬ್ರಾರ್ ಗಮನಾರ್ಹ ಏರಿಕೆ ಕಂಡಿದ್ದಾರೆ. ಸರಣಿಯಲ್ಲಿ ಏಳು ವಿಕೆಟ್ಗಳನ್ನು ಪಡೆದು ಪ್ರಮುಖ ಬೌಲರ್ ಎನಿಸಿಕೊಂಡಿರುವ ಪಂಜಾಬ್ ನ ವೇಗಿ, ಏಕದಿನ ಬೌಲರ್ಗಳ ರ್ಯಾಂಕಿಂಗ್ನಲ್ಲಿ 48ನೇ ಸ್ಥಾನ ಪಡೆದಿದ್ದಾರೆ.
ನ್ಯೂಝಿಲ್ಯಾಂಡ್ನ ವೇಗದ ಬೌಲರ್ಗಳಾದ ಜೇಕಬ್ ಡಫಿ ಹಾಗೂ ಕೈಲ್ ಜಮೀಸನ್ ಕೂಡ ರ್ಯಾಂಕಿಂಗ್ನಲ್ಲಿ ಪ್ರಗತಿ ಸಾಧಿಸಿದ್ದಾರೆ. ಡಫಿ ಎಂಟು ಸ್ಥಾನಗಳ ಭಡ್ತಿಯೊಂದಿಗೆ 43ನೇ ಸ್ಥಾನಕ್ಕೇರಿದರೆ, ಜಮೀಸನ್ 24 ಸ್ಥಾನ ಮೇಲಕ್ಕೇರಿ 60ನೇ ಸ್ಥಾನ ತಲುಪಿದ್ದಾರೆ.






