ಐಸಿಸಿ ಟ್ವೆಂಟಿ-20 ರ್ಯಾಂಕಿಂಗ್ |ನಂ.1 ಸ್ಥಾನದತ್ತ ಇಶಾನ್ ಕಿಶನ್, ಅಗ್ರಸ್ಥಾನ ಕಳೆದುಕೊಂಡ ವರುಣ್ ಚಕ್ರವರ್ತಿ

Photo Credit : PTI
ಹೊಸದಿಲ್ಲಿ, ಮಾ.11: ಇತ್ತೀಚೆಗೆ ಕೊನೆಗೊಂಡಿರುವ 2026ರ ಆವೃತ್ತಿಯ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ನೀರಸ ಪ್ರದರ್ಶನ ನೀಡಿದ್ದರೂ ಭಾರತದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಪುರುಷರ ಟಿ-20 ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.
ಮಾರ್ಚ್ 8ರಂದು ಅಹ್ಮದಾಬಾದ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡದ ವಿರುದ್ಧ ಭಾರತ ತಂಡವು 96 ರನ್ಗಳ ಅಂತರದಿಂದ ಜಯಶಾಲಿಯಾದ ನಂತರ ರ್ಯಾಂಕಿಂಗ್ ಬಿಡುಗಡೆಯಾಗಿದೆ. ಈ ಗೆಲುವಿನ ಮೂಲಕ ಭಾರತ ತಂಡವು ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿತ್ತು. ಮೂರು ಟಿ-20 ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದಿರುವ ಮೊದಲ ತಂಡ ಎನಿಸಿಕೊಂಡಿದೆ.
ಪಂದ್ಯಾವಳಿಯಲ್ಲಿ ಕಳಪೆ ಆರಂಭ ಪಡೆದಿದ್ದರೂ ಅಭಿಷೇಕ್ ಅವರು 875 ರೇಟಿಂಗ್ ಪಾಯಿಂಟ್ಸ್ನೊಂದಿಗೆ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಎಡಗೈ ಬ್ಯಾಟರ್ ಟೂರ್ನಿಯ ಆರಂಭದಲಿ ಪರದಾಟ ನಡೆಸಿದ್ದು, ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ಗಳ ಸಹಿತ 52 ರನ್ ಗಳಿಸಿ ಭಾರತಕ್ಕೆ ಬಿರುಸಿನ ಆರಂಭ ಒದಗಿಸಿದ್ದರು.
ಅಭಿಷೇಕ್ ಶರ್ಮಾರ ಮಿಂಚಿನ ಆರಂಭವು ಭಾರತದ ಬೃಹತ್ ಮೊತ್ತಕ್ಕೆ ನಿರ್ಣಾಯಕವಾಗಿದೆ. ಅಂತಿಮವಾಗಿ ಇದು ಪ್ರಶಸ್ತಿ ಗೆಲ್ಲುವಲ್ಲಿ ನೆರವಾಗಿದೆ.
ಅಭಿಷೇಕ್ ಅವರ ಸಹ ಆಟಗಾರ ಇಶಾನ್ ಕಿಶನ್ ಅವರು ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಒಟ್ಟು 317 ರನ್ ಗಳಿಸುವುದ ರೊಂದಿಗೆ ರ್ಯಾಂಕಿಂಗ್ನಲ್ಲಿ ಎರಡು ಸ್ಥಾನ ಮೇಲಕ್ಕೇರಿ ಎರಡನೇ ಸ್ಥಾನ ತಲುಪಿದ್ದಾರೆ. ತನ್ನ ಸ್ಥಿರ ಪ್ರದರ್ಶನದ ಮೂಲಕ ವಿಕೆಟ್ಕೀಪರ್-ಬ್ಯಾಟರ್ ಕಿಶನ್ ಜೀವನಶ್ರೇಷ್ಠ ರೇಟಿಂಗ್ ಪಾಯಿಂಟ್ಸ್ ಪಡೆದಿದ್ದಾರೆ.
ನ್ಯೂಝಿಲ್ಯಾಂಡ್ ಆಟಗಾರ ಟಿಮ್ ಸೀಫರ್ಟ್ ನಾಲ್ಕು ಸ್ಥಾನ ಭಡ್ತಿ ಪಡೆದು ಆರನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ನ ಜೇಕಬ್ ಬೆಥೆಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ 17 ಸ್ಥಾನಗಳಲ್ಲಿ ಭಡ್ತಿ ಪಡೆದು 16ನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ರ್ಯಾಂಕಿಂಗ್ನಲ್ಲಿ ಅಫ್ಘಾನಿಸ್ತಾನ ತಂಡದ ಸ್ಟಾರ್ ಆಟಗಾರ ರಶೀದ್ ಖಾನ್ ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿಯನ್ನು ಹಿಂದಿಕ್ಕಿ ಅಗ್ರ ಸ್ಥಾನ ಮರಳಿ ಪಡೆದಿದ್ದಾರೆ. ವರುಣ್ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 14 ವಿಕೆಟ್ಗಳನ್ನು ಪಡೆದಿದ್ದಾರೆ.
ಇದೇ ವೇಳೆ ಅಲ್ರೌಂಡರ್ಗಳ ರ್ಯಾಂಕಿಂಗ್ನಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ವಿಶ್ವಕಪ್ನಲ್ಲಿ ಯಶಸ್ವಿ ಅಭಿಯಾನ ನಡೆಸಿದ್ದ ಝಿಂಬಾಬ್ವೆ ತಂಡದ ನಾಯಕ ಸಿಕಂದರ್ ರಝಾ ಹಾಗೂ ಭಾರತದ ಹಾರ್ದಿಕ್ ಪಾಂಡ್ಯ ಮೊದಲೆರಡು ಸ್ಥಾನ ಪಡೆದಿದ್ದಾರೆ.






