ಮಹಿಳೆಯರ ಐಸಿಸಿ ಏಕದಿನ ರ್ಯಾಂಕಿಂಗ್ | ಸ್ಮೃತಿ ಅವರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ನ್ಯಾಟ್ ಸಿವೆರ್-ಬ್ರಂಟ್

ಸ್ಮತಿ ಮಂಧಾನ | PC : BCCI
ದುಬೈ, ಜು.29: ಇತ್ತೀಚೆಗೆ ಕೊನೆಗೊಂಡಿರುವ ಭಾರತ ಕ್ರಿಕೆಟ್ ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಭಾರತದ ಬ್ಯಾಟರ್ ಸ್ಮೃತಿ ಮಂಧಾನ ಅವರನ್ನು ಹಿಂದಿಕ್ಕಿದ ಇಂಗ್ಲೆಂಡ್ ತಂಡದ ನಾಯಕಿ ನ್ಯಾಟ್ ಸಿವೆರ್-ಬ್ರಂಟ್ ಅವರು ಮಹಿಳೆಯರ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನ ವಶಪಡಿಸಿಕೊಂಡಿದ್ದಾರೆ.
ಭಾರತ ತಂಡವು ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದ್ದರೂ ಸಿವೆರ್-ಬ್ರಂಟ್ ಅವರು ಬ್ಯಾಟಿಂಗ್ ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಈ ಮೂಲಕ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. 32ರ ಹರೆಯದ ಸಿವೆರ್-ಬ್ರಂಟ್ ಸರಣಿಯಲ್ಲಿ ಒಟ್ಟು 160 ರನ್ ಗಳಿಸಿದ್ದು, ಚೆಸ್ಟರ್-ಲೀ-ಸ್ಟ್ರೀಟ್ನಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ 98 ರನ್ ಗಳಿಸಿದ್ದರು. 731 ರೇಟಿಂಗ್ ಪಾಯಿಂಟ್ಸ್ ನೊಂದಿಗೆ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ.
ನಂ.1 ರ್ಯಾಂಕಿಂಗ್ ಸ್ವಲ್ಪ ಸಮಯ ಕಾಯ್ದುಕೊಂಡಿರುವ ಸ್ಮೃತಿ ಮಂಧಾನ ಅವರು ಸರಣಿಯಲ್ಲಿ ಒಟ್ಟು 115 ರನ್ ಗಳಿಸಿದ ಹೊರತಾಗಿಯೂ 728 ಅಂಕಗಳನ್ನು ಕಲೆ ಹಾಕಿ 2ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇದೇ ವೇಳೆ ಭಾರತ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರು ರ್ಯಾಂಕಿಂಗ್ ನಲ್ಲಿ ಮಹತ್ವದ ಪ್ರಗತಿ ಸಾಧಿಸಿದ್ದಾರೆ. ಮಧ್ಯಮ ಸರದಿಯಲ್ಲಿ ಅಮೂಲ್ಯ ಕೊಡುಗೆ ನೀಡಿದ ನಂತರ ಬಲಗೈ ಬ್ಯಾಟರ್ 10 ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ಪಡೆದಿದ್ದಾರೆ. ಕೌರ್ ಸಹ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಅವರು 15ನೇ ಸ್ಥಾನದಿಂದ 13ನೇ ಸ್ಥಾನ ತಲುಪಿದ್ದಾರೆ.
ಬೌಲರ್ ಗಳ ಪೈಕಿ ಭಾರತದ ದೀಪ್ತಿ ಶರ್ಮಾ ಅವರು ಏಕದಿನ ಬೌಲಿಂಗ್ ರ್ಯಾಂಕಿಂಗ್ ನಲ್ಲಿ ತನ್ನ 4ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಇಂಗ್ಲೆಂಡ್ ನ ಸೋಫಿ ಎಕ್ಲೆಸ್ಟೋನ್ ಅಗ್ರ ಸ್ಥಾನದಲ್ಲಿದ್ದು, ಆ ನಂತರ ಆಸ್ಟ್ರೇಲಿಯದ ಅಶ್ಲೆ ಗಾರ್ಡ್ನರ್ ಹಾಗೂ ಮೆಗಾನ್ ಶೆಟ್ ಅವರಿದ್ದಾರೆ.
ಐರ್ಲ್ಯಾಂಡ್ ನ ಆಟಗಾರ್ತಿ ಓರ್ಲಾ ಪ್ರೆಂಡರ್ ಗಾಸ್ಟ್ ಝಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪರಿಣಾಮ ಎಲ್ಲ ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದಾರೆ. 2ನೇ ಏಕದಿನ ಪಂದ್ಯದಲ್ಲಿ ಔಟಾಗದೆ 67 ರನ್ ಗಳಿಸಿದ ನಂತರ ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ 12 ಸ್ಥಾನ ಮೇಲಕ್ಕೇರಿ 22ನೇ ಸ್ಥಾನ ಹಂಚಿಕೊಂಡಿದ್ದಾರೆ.
ಬೌಲರ್ ಗಳ ಪೈಕಿ 10 ಸ್ಥಾನ ಮೇಲಕ್ಕೇರಿ 33ನೇ ರ್ಯಾಂಕ್ ತಲುಪಿದ್ದಾರೆ. ಇದೇ ಮೊದಲ ಬಾರಿ ಆಲ್ರೌಂಡರ್ ಗಳ ಪಟ್ಟಿಯಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದು, 10ನೇ ಸ್ಥಾನದಲ್ಲಿದ್ದಾರೆ.







