ಐಸಿಸಿ ಮಹಿಳಾ ಏಕದಿನ ವಿಶ್ವಕಪ್: ನಾಳೆ(ಅ.30) 2ನೇ ಸೆಮಿಫೈನಲ್

ಸಾಂದರ್ಭಿಕ ಚಿತ್ರ | Photo Credit : PTI
ಮುಂಬೈ, ಅ. 29: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್ ನಲ್ಲಿ, ಗುರುವಾರ ಭಾರತ ಮತ್ತು ಆಸ್ಟ್ರೇಲಿಯ ಮಹಿಳಾ ತಂಡಗಳು ಮುಖಾಮುಖಿಯಾಗಲಿವೆ.
ಹಾಲಿ ಚಾಂಪಿಯನ್ ಆಸ್ಟ್ರೇಲಿಯವು ಹಾಲಿ ವಿಶ್ವಕಪ್ ನಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದ್ದು, ಅಜೇಯವಾಗಿ ಸೆಮಿಫೈನಲ್ ತಲುಪಿದೆ. ನವೀ ಮುಂಬೈಯ ಡಾ. ಡಿ.ವೈ. ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಅದು ಭಾರತವನ್ನು ಇನ್ನೊಮ್ಮೆ ಸೋಲಿಸಿ ಫೈನಲ್ ಗೆ ಪ್ರವೇಶ ಪಡೆಯುವುದನ್ನು ಎದುರು ನೋಡುತ್ತಿದೆ.
ಅದು ಗುಂಪು ಹಂತದಲ್ಲಿ, ಈಗಾಗಲೇ ಆರು ವಿಜಯಗಳನ್ನು ಗಳಿಸಿದೆ ಮತ್ತು ಒಂದು ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯವು ಈಗ ಭರ್ಜರಿ ಫಾರ್ಮ್ ನಲ್ಲಿರುವಂತೆ ಕಂಡುಬರುತ್ತಿದೆ.
ತವರಿನ ಪ್ರೇಕ್ಷಕರ ಅಗಾಧ ಬೆಂಬಲದ ಲಾಭವನ್ನು ಭಾರತೀಯ ತಂಡವು ಪಡೆಯಲಿದೆ. ದೇಶದ 140 ಕೋಟಿ ಜನರು ಭಾರತೀಯ ಮಹಿಳಾ ತಂಡವು ಮೊದಲ ಬಾರಿಗೆ ವಿಶ್ವಕಪ್ ಎತ್ತುವುದನ್ನು ನೋಡಲು ಹಾತೊರೆಯುತ್ತಿದೆ.
‘‘ನಾವಿಲ್ಲಿ ಕೇವಲ ಮೈದಾನದಲ್ಲಿರುವ 11 ಮಂದಿಯ ಜೊತೆ ಆಡುತ್ತಿಲ್ಲ, ಇಡೀ ದೇಶದ ಜೊತೆಗೆ ಆಡುತ್ತಿದ್ದೇವೆ. ಇಡೀ ಸ್ಟೇಡಿಯಮ್ ನೀಲಿ ಸಾಗರವಾಗಿ ಪರಿವರ್ತನೆಯಾಗಲಿದೆ’’ ಎಂಬುದಾಗಿ ಆಸ್ಟ್ರೇಲಿಯ ತಂಡದ ಲೆಗ್ ಸ್ಪಿನ್ನರ್ ಅಲಾನಾ ಕಿಂಗ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ಆಸ್ಟ್ರೇಲಿಯವೂ ಸಮಸ್ಯೆಗಳನ್ನು ಎದುರಿಸುತ್ತಿದೆ. ಆರಂಭಿಕ ಹಂತದಲ್ಲಿ, ಪಾಕಿಸ್ತಾನವು ಆಸ್ಟ್ರೇಲಿಯವನ್ನು 7 ವಿಕೆಟ್ ಗಳ ನಷ್ಟಕ್ಕೆ 76 ರನ್ ಗಳಿಗೆ ನಿಯಂತ್ರಿಸಿತ್ತು. ಆದರೆ, ಬಳಿಕ ಚೇತರಿಸಿಕೊಂಡ ಆಸ್ಟ್ರೇಲಿಯವು 107 ರನ್ ಗಳ ಸುಲಭ ಜಯವನ್ನು ಗಳಿಸಿತ್ತು.
ಭಾರತ ಕೂಡ ಒಂದು ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ 330 ರನ್ ಗಳ ಕಠಿಣ ಗುರಿಯನ್ನು ನಿಗದಿಪಡಿಸಿತ್ತು. ಆದರೆ, ಹಾಲಿ ಚಾಂಪಿಯನ್ನರು ಇನ್ನೂ ಒಂದು ಓವರ್ ಬಾಕಿಯಿರುವಂತೆಯೇ ಮತ್ತು ಮೂರು ವಿಕೆಟ್ ಗಳು ಕೈಯಲ್ಲಿರುವಂತೆಯೇ ಗೆಲುವು ಘೋಷಿಸಿದ್ದಾರೆ.
ನಾಯಕಿ ಅಲಿಸಾ ಹೀಲಿಯ ವಾಪಸಾತಿಯನ್ನು ಆಸ್ಟ್ರೇಲಿಯ ಎದುರು ನೋಡುತ್ತಿದೆ. ಅವರು ಮೀನಖಂಡದ ಗಾಯದಿಂದಾಗಿ ಕಳೆದ ಎರಡು ಲೀಗ್ ಪಂದ್ಯಗಳಲ್ಲಿ ಆಡಿಲ್ಲ.
ಭಾರತದ ಸೆಮಿಫೈನಲ್ ಹಾದಿ ಸುಲಭವಾಗಿರಲಿಲ್ಲ. ನಿರಂತರ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದ ಬಳಿಕ ಅದು ಲಭ್ಯವಿದ್ದ ಅಂತಿಮ ಸೆಮಿಫೈನಲ್ ಸ್ಥಾನವನ್ನು ಸಂಪಾದಿಸಿತ್ತು.
ಆರಂಭಿಕ ಬ್ಯಾಟರ್ ಸ್ಮತಿ ಮಂಧಾನ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ. 365 ರನ್ ಗಳನ್ನು ಗಳಿಸಿರುವ ಅವರು ಪಂದ್ಯಾವಳಿಯ ಗರಿಷ್ಠ ರನ್ ಗಳಿಕೆದಾರರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
ಪಂದ್ಯ ಆರಂಭ: ಅಪರಾಹ್ನ 3 ಗಂಟೆ
►ತಂಡಗಳು
ಭಾರತ: ಹರ್ಮನ್ಪ್ರೀತ್ ಕೌರ್ (ನಾಯಕಿ), ಉಮಾ ಚೇಟ್ರಿ, ಹರ್ಲೀನ್ ದೇವಲ್, ಕ್ರಾಂತಿ
ಗೌಡ, ರಿಚಾ ಘೋಷ್, ಅಮನ್ಜೋತ್ ಕೌರ್, ಸ್ಮತಿ ಮಂಧಾನ, ಸ್ನೇಹ್ ರಾಣಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಶ್ರೀ ಚರಣಿ.
ಆಸ್ಟ್ರೇಲಿಯ: ಅಲಿಸಾ ಹೀಲಿ (ನಾಯಕಿ), ಡಾರ್ಸಲ್ ಬ್ರೌನ್, ಆ್ಯಶ್ಲೇ ಗಾರ್ಡನರ್, ಕಿಮ್ ಗಾರ್ತ್, ಹೆದರ್ ಗ್ರಹಾಮ್, ಅಲಾನಾ ಕಿಂಗ್, ಫೀಬ್ ಲಿಚ್ಫೀಲ್ಡ್, ಟಹ್ಲಿಯಾ ಮೆಗ್ರಾ, ಸೋಫೀ ಮೋಲಿನೋಸ್, ಬೆತ್ ಮೂನಿ, ಎಲೈಸ್ ಪೆರಿ, ಮೇಗನ್ ಶಟ್, ಅನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೋಲ್, ಜಾರ್ಜಿಯಾ ವೇರ್ ಹ್ಯಾಮ್







