ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ | ಹರ್ಮನ್ಪ್ರೀತ್ ನೇತೃತ್ವದ ಭಾರತ ತಂಡ ಪ್ರಕಟ
ಕನ್ನಡತಿ ಶ್ರೇಯಾಂಕಾ ಪಾಟೀಲ್ಗೆ ಅವಕಾಶ

ಶ್ರೇಯಾಂಕಾ ಪಾಟೀಲ್ | PC : PTI
ಹೊಸದಿಲ್ಲಿ : ಮುಂಬರುವ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಗೆ ಹರ್ಮನ್ಪ್ರೀತ್ ಕೌರ್ ನೇತೃತ್ವದ 15 ಸದಸ್ಯರ ಭಾರತೀಯ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದೆ.
ಮಂಗಳವಾರ ಭಾರತದ ಮಹಿಳಾ ತಂಡವನ್ನು ಪ್ರಕಟಿಸಲಾಗಿದ್ದು, ಪಂದ್ಯಾವಳಿಯು ಅಕ್ಟೋಬರ್ 3ರಿಂದ ಯುಎಇನಲ್ಲಿ ನಡೆಯಲಿದೆ.
ಹರ್ಮನ್ಪ್ರೀತ್ ಕೌರ್ ತಂಡಕ್ಕೆ ಅನುಭವ ಒದಗಿಸಲಿದ್ದು, ತಮ್ಮ ಪ್ರದರ್ಶನದ ಮೂಲಕ ತಂಡಕ್ಕೆ ವಿಶ್ವಾಸ ತುಂಬಲಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗ ಅಶಾಂತಿಗೊಂಡಿರುವ ಬಾಂಗ್ಲಾದೇಶದಿಂದ ಯುಎಇಗೆ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯನ್ನು ಈಗಾಗಲೇ ಸ್ಥಳಾಂತರಗೊಳಿಸಲಾಗಿದೆ.
ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲ ಯಸ್ತಿಕಾ ಭಾಟಿಯಾ ಹಾಗೂ ಸ್ಪಿನ್ ಆಲ್ರೌಂಡರ್, ಕನ್ನಡತಿ ಶ್ರೇಯಾಂಕಾ ಪಾಟೀಲ್ ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸ್ಪರ್ಧೆಯ ವೇಳೆಗೆ ಫಿಟ್ನೆಸ್ ಉಳಿಸಿಕೊಂಡರೆ ಈ ಇಬ್ಬರು ಆಟಗಾರ್ತಿಯರು ಭಾಗವಹಿಸಬಹುದು.
ಸ್ಟಾರ್ ಬ್ಯಾಟರ್ ಸ್ಮತಿ ಮಂಧಾನ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದು ಮೈದಾನದ ಹೊರಗೆ ಹಾಗೂ ಒಳಗೆ ನಾಯಕತ್ವಕ್ಕೆ ಹೆಚ್ಚು ಶಕ್ತಿ ಒದಗಿಸಲಿದೆ.
ಟಿ-20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾವು ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡದೊಂದಿಗೆ ಎ ಗುಂಪಿನಲ್ಲಿದೆ.
ಭಾರತ ತಂಡ ಮೊತ್ತ ಮೊದಲ ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಆಸ್ಟ್ರೇಲಿಯ ಹಾಗೂ ನ್ಯೂಝಿಲ್ಯಾಂಡ್ ನಂತಹ ಬಲಿಷ್ಠ ತಂಡಗಳೆದುದು ಸ್ಪರ್ಧಿಸುವುದು ಸವಾಲಿನ ವಿಚಾರವಾಗಿದೆ.
ಕೌರ್ ನಾಯಕತ್ವ ಹಾಗೂ ಮಂಧಾನ ಅವರ ಕೌಶಲ್ಯದ ಬೆಂಬಲದಿಂದ ಭಾರತೀಯ ತಂಡ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ. ಭಾರತವು ಚೊಚ್ಚಲ ಮಹಿಳೆಯರ ಟಿ20 ವಿಶ್ವಕಪ್ ಜಯಿಸುವುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅನುಭವಿ ಆಟಗಾರ್ತಿಯರು ಹಾಗೂ ಹೊಸ ಪ್ರತಿಭೆಗಳ ಮಿಶ್ರಣವಾಗಿರುವ ಭಾರತ ತಂಡ ಭರವಸೆ ಮೂಡಿಸಿದೆ.
►ಐಸಿಸಿ ಮಹಿಳೆಯರ ಟಿ20 ವಿಶ್ವಕಪ್-2024ಕ್ಕೆ ಭಾರತ ತಂಡ
ಹರ್ಮನ್ಪ್ರೀತ್ ಕೌರ್(ನಾಯಕಿ), ಸ್ಮತಿ ಮಂಧಾನ(ಉಪ ನಾಯಕಿ), ಶೆಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ರಿಚಾ ಘೋಷ್(ವಿಕೆಟ್ಕೀಪರ್), ಯಸ್ತಿಕಾ ಭಾಟಿಯಾ(ವಿಕೆಟ್ಕೀಪರ್), ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ದಯಾಳನ್ ಹೇಮಲತಾ, ಆಶಾ ಶೋಭನ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಸಾಜನಾ ಸಂಜೀವನ್.
ಮೀಸಲು ಆಟಗಾರ್ತಿಯರು: ಉಮಾ ಚೆಟ್ರಿ(ವಿಕೆಟ್ಕೀಪರ್), ತನುಜಾ ಕನ್ವರ್, ಸೈಮಾ ಠಾಕೂರ್.







