ಐಎಲ್ಟಿ 20 ಟೂರ್ನಿ: ಮೂರನೇ ಪ್ರಯತ್ನದಲ್ಲಿ ಪ್ರಶಸ್ತಿ ಗೆದ್ದ ಡೆಸರ್ಟ್ ವೈಪರ್ಸ್

PC: x.com/cricbuzz
ದುಬೈ: ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಎಲ್ಟಿ 20 ಟೂರ್ನಿಯಲ್ಲಿ ಡೆಸರ್ಟ್ ವೈಪರ್ಸ್ ತಂಡ ಎಂಐ ಎಮಿರೇಟ್ಸ್ ತಂಡವನ್ನು 46 ರನ್ಗಳ ಅಂತರದಿಂದ ಸೋಲಿಸಿ ಚೊಚ್ಚಲ ಪ್ರಶಸ್ತಿ ಗೆದ್ದಿದೆ. ಈ ಹಿಂದೆ ಎರಡೂ ಬಾರಿ ಫೈನಲ್ ನಲ್ಲಿ ಮುಗ್ಗರಿಸಿದ್ದ ಡೆಸರ್ಟ್ ವೈಪರ್ಸ್ ಈ ಬಾರಿ ಏಕಪಕ್ಷೀಯ ಫೈನಲ್ ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಟೂರ್ನಿಯ 10 ಪಂದ್ಯಗಳ ಪೈಕಿ ಕೇವಲ ಎರಡು ಪಂದ್ಯಗಳನ್ನು ಸೋತಿದ್ದ ಡೆಸರ್ಟ್ ವೈಪರ್ಸ್ ನಾಕೌಟ್ ನಲ್ಲಿ ಎಂಐ ಎಮಿರೇಟ್ಸ್ ವಿರುದ್ಧ ಎರಡು ಬಾರಿಯೂ ಪ್ರಾಬಲ್ಯ ಸ್ಥಾಪಿಸಿತ್ತು. ಕ್ವಾಲಿಫೈಯರ್ 1ನಲ್ಲಿ 45 ರನ್ ಗಳಿಂದ ಗೆದ್ದ ಡೆಸರ್ಟ್, ಫೈನಲ್ ನಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿತು.
ಟಾಸ್ ಗೆದ್ದ ಎಂಐ ಎಮಿರೇಟ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕ್ವಾಲಿಫೈಯರ್ ನಲ್ಲಿ ಎಂಐಐ ವಿರುದ್ಧ ಅಜೇಯ 120 ರನ್ ಸಿಡಿಸಿದ್ದ ಆ್ಯಂಡ್ರೀಸ್ ಗೌಸ್ ಗಾಯದ ಕಾರಣದಿಂದ ಹೊರಗುಳಿದಿದ್ದರು. ಆದರೆ ಕರನ್ ಸ್ಯಾಮ್ 51 ರನ್ಗಳಲ್ಲಿ 74 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ 4 ವಿಕೆಟ್ ನಷ್ಟಕ್ಕೆ 182 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಎಐಇ ಬೌಲಿಂಗ್ ನಲ್ಲಿ 12 ವೈಡ್ ಹಿನ್ನೆಲೆಯಲ್ಲಿ ಸುಮಾರು ಎರಡು ಓವರ್ ಹೆಚ್ಚುವರಿಯಾಗಿ ಲಭ್ಯವಾದಂತಾಯಿತು.
ಡೇವಿಡ್ ಪೇನ್ (42ಕ್ಕೆ 3) ಮತ್ತು ನಸೀಮ್ ಶಾ (18ಕ್ಕೆ 3) ಹಾಗೂ ಉಸ್ಮಾನ್ ತಾರಿಕ್ (20ಕ್ಕೆ 2) ಅವರ ಶಿಸ್ತುಬದ್ಧ ಬೌಲಿಂಗ್ ನಿಂದ ಡೆಸರ್ಟ್ ತಂಡ ಸುಲಭ ಜಯ ಸಾಧಿಸಿತು.







