ಭಾರತ-ಅಫ್ಘಾನಿಸ್ತಾನ ಏಕೈಕ ಟೆಸ್ಟ್ | ಭೋಜನ ವಿರಾಮದ ವೇಳೆಗೆ ಭಾರತ ಒಂದು ವಿಕೆಟ್ ನಷ್ಟಕ್ಕೆ 96 ರನ್

Photo credit: PTI
ಕೆ.ಎಲ್.ರಾಹುಲ್, ಸಾಯಿ ಸುದರ್ಶನ್ ಸಮಯೋಚಿತ ಜೊತೆಯಾಟ
ನ್ಯೂ ಚಂಡೀಗಢ: ಇಲ್ಲಿನ ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ ತಂಡದೆದುರಿನ ಏಕೈಕ ಟೆಸ್ಟ್ ಕ್ರಿಕೆಟ್ ನಲ್ಲಿ ಕೆ.ಎಲ್.ರಾಹುಲ್ ಹಾಗೂ ಸಾಯಿ ಸುದರ್ಶನ್ ನಡುವಿನ ಸಮಯೋಚಿತ ಜೊತೆಯಾಟದಿಂದಾಗಿ ಭಾರತ ತಂಡ ಭೋಜನ ವಿರಾಮದ ವೇಳೆಗೆ ಒಂದು ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಭಾರತ ತಂಡ, ಕೇವಲ 41 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (24) ವಿಕೆಟ್ ಕಳೆದುಕೊಂಡಿತು. ಮುಹಮ್ಮದ್ ಸಲೀಂ ಬೌಲಿಂಗ್ ನಲ್ಲಿ ಅವರು ಅಫ್ಸರ್ ಝಜೈಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಹಂತದಲ್ಲಿ ಕೆ.ಎಲ್.ರಾಹುಲ್ ಜೊತೆಯಾದ ಸಾಯಿ ಸುದರ್ಶನ್, ಉತ್ತಮ ಜೊತೆಯಾಟ ಪ್ರದರ್ಶಿಸಿ ಮುರಿಯದ ಎರಡನೆಯ ವಿಕೆಟ್ ಗೆ 55 ರನ್ ಕಲೆ ಹಾಕಿದ್ದಾರೆ.
70 ಬಾಲ್ ಗಳನ್ನು ಎದುರಿಸಿ ಐದು ಬೌಂಡರಿಗಳ ನೆರವಿನೊಂದಿಗೆ ಅಜೇಯ 37 ರನ್ ಗಳಿಸಿರುವ ಕೆ.ಎಲ್.ರಾಹುಲ್ ಗೆ ಸಾಥ್ ನೀಡಿರುವ ಸಾಯಿ ಸುದರ್ಶನ್, 49 ಬಾಲ್ ಗಳಲ್ಲಿ ಆರು ಬೌಂಡರಿಗಳ ನೆರವಿನಿಂದ ಅಜೇಯ 32 ರನ್ ಗಳಿಸಿದ್ದಾರೆ.
Next Story




