2ನೇ ಟೆಸ್ಟ್: ಗಿಲ್ ಮತ್ತೊಂದು ಆಕರ್ಷಕ ಶತಕ
ಇಂಗ್ಲೆಂಡ್ ಗೆಲುವಿಗೆ 608 ರನ್ ಗುರಿ ನೀಡಿದ ಭಾರತ

Photo : x/BCCI
ಬರ್ಮಿಂಗ್ಹ್ಯಾಮ್: ನಾಯಕನಾಗಿ 4 ಇನಿಂಗ್ಸ್ ಗಳಲ್ಲಿ ತನ್ನ 3ನೇ ಶತಕವನ್ನು ಸಿಡಿಸಿದ ಶುಭಮನ್ ಗಿಲ್ ನೆರವಿನಿಂದ ಟೀಮ್ ಇಂಡಿಯಾ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ದ್ವಿತೀಯ ಟೆಸ್ಟ್ ಪಂದ್ಯದ ಗೆಲುವಿಗೆ 608 ರನ್ ಗುರಿ ನಿಗದಿಪಡಿಸಿದೆ.
4ನೇ ದಿನವಾದ ಶನಿವಾರ ಭಾರತ ತಂಡವು ತನ್ನ 2ನೇ ಇನಿಂಗ್ಸ್ನಲ್ಲಿ 6 ವಿಕೆಟ್ಗಳ ನಷ್ಟಕ್ಕೆ 427 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದ್ದು, ಒಟ್ಟು 607 ರನ್ ಮುನ್ನಡೆ ಪಡೆಯಿತು.
ಗಿಲ್ ಟೀ ವಿರಾಮಕ್ಕೆ ಮೊದಲು ತನ್ನ 8ನೇ ಶತಕ (161 ರನ್, 162 ಎಸೆತ, 13 ಬೌಂಡರಿ,8 ಸಿಕ್ಸರ್) ಗಳಿಸಿದ್ದು, ರವೀಂದ್ರ ಜಡೇಜ(ಔಟಾಗದೆ 69, 118 ಎಸೆತ, 5 ಬೌಂಡರಿ, 1 ಸಿಕ್ಸರ್) ಅವರೊಂದಿಗೆ 5ನೇ ವಿಕೆಟ್ಗೆ 208 ಎಸೆತಗಳಲ್ಲಿ 175 ರನ್ ಜೊತೆಯಾಟ ನಡೆಸಿ ಇಂಗ್ಲೆಂಡ್ ಗೆಲುವಿಗೆ ಕಠಿಣ ಗುರಿ ನೀಡಿದರು. ಗಿಲ್ ಔಟಾದ ಬೆನ್ನಿಗೆ ಭಾರತ ತಂಡವು ತನ್ನ ಇನಿಂಗ್ಸ್ ಡಿಕ್ಲೇರ್ ಮಾಡಿತು.
ಭರ್ಜರಿ ಬ್ಯಾಟಿಂಗ್ ಮೂಲಕ ಗಿಲ್ ಅವರು ಒಂದೇ ಟೆಸ್ಟ್ನಲ್ಲಿ ಗರಿಷ್ಠ ರನ್ ಗಳಿಸಿದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರ ದೀರ್ಘಕಾಲದ ದಾಖಲೆಯನ್ನು ಮುರಿದರು. ಗವಾಸ್ಕರ್ ಅವರು 1971ರಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ನಲ್ಲಿ ಒಟ್ಟು 344 ರನ್ ಗಳಿಸಿದ್ದರು.
ಗಿಲ್ ಹಾಗೂ ರಿಷಭ್ ಪಂತ್ 4ನೇ ವಿಕೆಟ್ನಲ್ಲಿ 103 ಎಸೆತಗಳಲ್ಲಿ 110 ರನ್ ಜೊತೆಯಾಟ ನಡೆಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.
ಇದಕ್ಕೂ ಮೊದಲು 1 ವಿಕೆಟ್ ನಷ್ಟಕ್ಕೆ 64 ರನ್ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ಭಾರತ ತಂಡದ ಪರ ಕೆ.ಎಲ್.ರಾಹುಲ್(55 ರನ್, 84 ಎಸೆತ, 10 ಬೌಂಡರಿ) ಹಾಗೂ ಕರುಣ್ ನಾಯರ್(26 ರನ್, 46 ಎಸೆತ) 2ನೇ ವಿಕೆಟ್ ಗೆ 45 ರನ್ ಸೇರಿಸಿದರು. ನಾಯರ್ ಅವರು ಕಾರ್ಸ್ಗೆ ಔಟಾದ ನಂತರ ರಾಹುಲ್ ಹಾಗೂ ಗಿಲ್ 3ನೇ ವಿಕೆಟ್ಗೆ 30 ರನ್ ಕಲೆ ಹಾಕಿದರು.
ರಾಹುಲ್ ಅರ್ಧಶತಕ ಗಳಿಸಿದ ಬೆನ್ನಿಗೇ ಟಂಗ್ ಬೌಲಿಂಗ್ ನಲ್ಲಿ ಕ್ಲೀನ್ಬೌಲ್ಡಾದರು.
ಮೊದಲ ಇನಿಂಗ್ಸ್ನಲ್ಲಿ ದ್ವಿಶತಕ ಗಳಿಸಿದ್ದ ಗಿಲ್ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು.
ಶುಭಮನ್ ಗಿಲ್ ಅವರು ಒಂದೇ ಟೆಸ್ಟ್ನಲ್ಲಿ ದ್ವಿಶತಕ ಹಾಗೂ ಶತಕ ಗಳಿಸಿದ 9ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸುನೀಲ್ ಗವಾಸ್ಕರ್(ವೆಸ್ಟ್ಇಂಡೀಸ್ ವಿರುದ್ಧ, ಪೋರ್ಟ್ ಆಫ್ ಸ್ಪೇನ್, 1971)ನಂತರ ಈ ಸಾಧನೆ ಮಾಡಿದ ಭಾರತದ 2ನೇ ಆಟಗಾರನಾಗಿದ್ದಾರೆ.
ಗ್ರಹಾಂ ಗೂಚ್ ನಂತರ ಈ ಸಾಧನೆ ಮಾಡಿದ 2ನೇ ನಾಯಕನಾಗಿದ್ದಾರೆ. ಗೂಚ್ ಭಾರತದ ವಿರುದ್ಧವೇ 1990ರಲ್ಲಿ ಲಾರ್ಡ್ಸ್ನಲ್ಲಿ ಈ ಸಾಧನೆ ಮಾಡಿದ್ದರು.
ಗಿಲ್ ಅವರು ನಾಯಕನಾಗಿ ಆಡಿದ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕಗಳನ್ನು ಗಳಿಸಿದ ಭಾರತದ 2ನೇ ಆಟಗಾರನಾಗಿದ್ದಾರೆ. ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾರೆ.
ವಿಜಯ್ ಹಝಾರೆ, ಜಾಕಿ ಮೆಕ್ಗ್ಲೀವ್, ಗ್ರೆಗ್ ಚಾಪೆಲ್, ಸುನೀಲ್ ಗವಾಸ್ಕರ್, ಅಲಸ್ಟೈರ್ ಕುಕ್, ಸ್ಟೀವನ್ ಸ್ಮಿತ್ ಹಾಗೂ ಧನಂಜಯ ಡಿ ಸಿಲ್ವ ತಲಾ 2 ಶತಕ ಗಳಿಸಿದ್ದರು.