ಶುಭ್ಮನ್ ಗಿಲ್ ಪಡೆಯಿಂದ ಐತಿಹಾಸಿಕ ಸಾಧನೆ : ಒಂದೇ ಟೆಸ್ಟ್ನಲ್ಲಿ ಸಾವಿರ ರನ್ ಸಿಡಿಸಿದ ದೇಶಗಳ ಸಾಲಿಗೆ ಭಾರತ ಸೇರ್ಪಡೆ

PC | https://x.com/BCCI
ಹೊಸದಿಲ್ಲಿ: ದಾಖಲೆಗಳು ತರಗೆಲೆಗಳಂತೆ ಪತನಗೊಂಡ ಎಡ್ಜ್ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡ ಮತ್ತೊಂದು ವಿಶಿಷ್ಟ ದಾಖಲೆ ನಿರ್ಮಿಸಿದೆ. ಇಂಗ್ಲೆಂಡ್ ವಿರುದ್ಧ ಒಂದೇ ಟೆಸ್ಟ್ನಲ್ಲಿ ಸಾವಿರಕ್ಕಿಂತ ಅಧಿಕ (1014) ರನ್ ಸಿಡಿಸಿದ ಶುಭ್ಮನ್ ಗಿಲ್ ಪಡೆ, ಈ ಸಾಧನೆ ಮಾಡಿದ ತಂಡಗಳ ವಿಶೇಷ ಕ್ಲಬ್ಗೆ ಭಾರತವನ್ನು ಸೇರಿಸುವಂತೆ ಮಾಡಿದೆ.
ಯಾವುದೇ ತಂಡ ಒಂದು ಟೆಸ್ಟ್ನಲ್ಲಿ ನಾಲ್ಕಂಕಿಯ ಮೊತ್ತ ತಲುಪುವುದು ದೊಡ್ಡ ದಾಖಲೆ. ಇದಕ್ಕೂ ಮುನ್ನ 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡು ಇನಿಂಗ್ಸ್ಗಳಲ್ಲಿ 916 ರನ್ ಗಳಿಸಿದ್ದು ಭಾರತದ ಇದುವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಇದೀಗ ಭಾರತ ಸಾವಿರ ರನ್ ಸಿಡಿಸಿದ ದೇಶಗಳ ಕ್ಲಬ್ಗೆ ಸೇರ್ಪಡೆಯಾಗಿದೆ.
ಇದಕ್ಕೂ ಮುನ್ನ ಇಂಗ್ಲೆಂಡ್ (1930), ಆಸ್ಟ್ರೇಲಿಯಾ (1934 & 1969), ಪಾಕಿಸ್ತಾನ (2006), ದಕ್ಷಿಣ ಆಫ್ರಿಕಾ (1939) ಈ ಸಾಧನೆ ಮಾಡಿದ್ದವು. ವೆಸ್ಟ್ಇಂಡೀಸ್ ವಿರುದ್ಧ ಕಿಂಗ್ಸ್ಟನ್ನಲ್ಲಿ ಇಂಗ್ಲೆಂಡ್ ತಂಡ ಗಳಿಸಿದ 1121 ರನ್ಗಳು ಟೆಸ್ಟ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಎನಿಸಿದೆ. ಪಾಕಿಸ್ತಾನ (1078), ಆಸ್ಟ್ರೇಲಿಯಾ (1028), ಭಾರತ (1014), ಅಸ್ಟ್ರೇಲಿಯಾ (1013) ಮತ್ತು ದಕ್ಷಿಣ ಆಫ್ರಿಕಾ (1011) ನಂತರದ ಸ್ಥಾನಗಳಲ್ಲಿವೆ.
ಭಾರತ ತಂಡ ಮೊದಲ ಎರಡು ಟೆಸ್ಟ್ಗಳಲ್ಲಿ ಒಟ್ಟು 1849 ರನ್ ಕಲೆ ಹಾಕಿದ್ದು, ಇದು ಟೆಸ್ಟ್ ಕ್ರಿಕೆಟ್ನ ಇತಿಹಾಸದಲ್ಲೇ ಒಂದು ತಂಡ ಮೊದಲ ಎರಡು ಟೆಸ್ಟ್ಗಳಲ್ಲಿ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ. ಇದು ಭಾರತದ ಬ್ಯಾಟಿಂಗ್ ಪ್ರಾಬಲ್ಯವನ್ನು ಸಾರುವ ಹಾಗೂ ಸರಣಿಯ ಉಳಿದ ಪಂದ್ಯಗಳ ಸೂಚಕ ಎನಿಸಿದೆ.
ಭಾರತ ಪ್ರಸಕ್ತ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 587ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್ನಲ್ಲಿ 6 ವಿಕೆಟ್ಗೆ 427 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಇಂಗ್ಲೆಂಡ್ ತಂಡಕ್ಕೆ ಗೆಲುವಿಗೆ 608 ರನ್ಗಳ ಗುರಿ ನೀಡಿದೆ. ಇದು ಭಾರತ ತಂಡ ನಾಲ್ಕನೇ ಇನ್ನಿಂಗ್ಸ್ಗೆ ಇಂಗ್ಲೆಂಡ್ಗೆ ನೀಡಿದ ಎರಡನೇ ಗರಿಷ್ಠ ಗುರಿಯಾಗಿದೆ.